ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯ ಕಾರು ಬಳಕೆ ಎಂಬ ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮ: ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ ಪೊಲೀಸ್ ಕಮಿಷನರ್
ಮಂಗಳೂರು: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನ ಅಡ್ಯಾರ್ ನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಯ ಕಾರನ್ನು ಬಳಸಿರುವುದಾಗಿ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದ್ದು, ಇದು ಸುಳ್ಳು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಭಟನೆಯ ಸಂದರ್ಭ ಬಂದೋಬಸ್ತಿನಲ್ಲಿದ್ದ ಎಸಿಪಿ (ಸಂಚಾರ ಉಪ ವಿಭಾಗ)ಯವರು ಕಾರ್ಯಕ್ರಮ ಮುಗಿದ ಬಳಿಕ ಮಂಗಳೂರು ಕಡೆಗೆ ತೆರಳುವ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು. ಈ ವೇಳೆ ಟೆಂಪೋ ಟ್ರಾವೆಲರ್ ವಾಹನವೊಂದು ಚಾಲಕನ ಅಜಾಗರೂಕತೆಯ ಚಾಲನೆ ಕಾರಣ 16 ವರ್ಷ ಬಾಲಕನೋರ್ವನಿಗೆ ಢಿಕ್ಕಿ ಹೊಡೆದು ಕಾಲಿಗೆ ಗಾಯವಾಗಿತ್ತು. ಈ ಸಂದರ್ಭ ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಗಾಯಾಳುವಿನ ಕಡೆಯವರು ಎಸಿಪಿಯವರ ಕಾರನ್ನು ನಿಲ್ಲಿಸಿ, ಗಾಯಾಳುವನ್ನು ಚಿಕಿತ್ಸೆಗಾಗಿ ಎಸಿಪಿಯವರಿದ್ದ ಕಾರಿನಲ್ಲಿ ಕಳುಹಿಸಿದ್ದಾರೆ. ಗಾಯಾಳುವನ್ನು ಅಡ್ಯಾರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಟೆಂಪೋ ಟ್ರಾವೆಲರ್ ವಶಕ್ಕೆ ಪಡೆದು, ಚಾಲಕನನ್ನು ಠಾಣೆಗೆ ಕಳುಹಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತದಲ್ಲಿ ಗಾಯವಾದಾಗ ಪ್ರಥಮ ಚಿಕಿತ್ಸೆ (ಗೋಲ್ಡನ್ ಹವರ್) ಕೊಡಿಸುವುದು ಪೊಲೀಸರ ಕರ್ತವ್ಯವಾಗಿದ್ದು, ಪೊಲೀಸರು ಘಟನೆಯನ್ನು ನೋಡಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆಗೆ ಪೊಲೀಸ್ ಜೀಪಿನ ಚಾಲಕನೊಂದಿಗೆ ಕಳುಹಿಸಿ ಸದರಿ ಮಹಿಳಾ ಸಿಬ್ಬಂದಿಯವರು ಕರ್ತವ್ಯ ಮುಂದುವರಿಸಿರುತ್ತಾರೆ ಎಂದು ತಿಳಿಸಿದ್ದಾರೆ.




