ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಎಂ.ಡಿ. ಸಮೀರ್ ವಿಡಿಯೋ: ಯೂಟ್ಯೂಬ್ ನಿಂದ ವಿಡಿಯೋವನ್ನು ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ
ಬೆಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತಂತೆ ಎಂ.ಡಿ. ಸಮೀರ್ ಎಂಬವರು ದೂತ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದ ವಿಡಿಯೋವನ್ನು ತೆಗೆಯುವಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಎ.ಎಸ್.ಸುಕೇಶ್ ಮತ್ತು ಶೀನಪ್ಪ ಎಂಬವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ಸಮೀರ್ ಮಾಡಿರುವ ವಿಡಿಯೋಗೆ ಅರ್ಜಿದಾರರ ವಿರುದ್ಧವಾಗಿರುವವರು ಪ್ರಾಯೋಜಕತ್ವ ವಹಿಸಿದ್ದಾರೆ. ಸಂವಿಧಾನದ 19(1)(ಎ) ವಿಧಿಯಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಲಭ್ಯವಿದ್ದರೂ ಸಂವಿಧಾನದ 19(2)ನೇ ವಿಧಿಯಡಿ ಈ ಸ್ವಾತಂತ್ರ್ಯ ಪರಿಪೂರ್ಣವಲ್ಲ. ಸಕಾರಣಗಳಿದ್ದಾಗ ಅದರ ಮೇಲೆ ನಿರ್ಬಂಧ ವಿಧಿಸಬಹುದಾಗಿದ್ದು, ಮಾನಹಾನಿಯಂತಹ ಸಂದರ್ಭದಲ್ಲಿ ನಿರ್ಬಂಧ ಮಾಡಬಹುದಾಗಿದೆ. ಸಮೀರ್ ವಿಡಿಯೋದಲ್ಲಿನ ವಿಷಯವು ಸುಳ್ಳಾಗಿದ್ದು, ಅದು ಮಾನಹಾನಿ ಆಗುವ ರೀತಿಯಿದೆ ಎಂದು ಆಕ್ಷೇಪಿಸಿದ್ದರು.
ವಿಡಿಯೋ ಹಿನ್ನೆಲೆಯಲ್ಲಿ ಬಳ್ಳಾರಿ ಪೊಲೀಸರು ಯೂಟ್ಯೂಬರ್ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿ, ನೋಟಿಸ್ ಜಾರಿ ಮಾಡಿದ್ದರು. ಬಳಿಕ ಪೊಲೀಸ್ ನೋಟಿಸ್ ಮತ್ತು ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಈ ನಡುವೆ, ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾಗೆ ನ್ಯಾಯ ಒದಗಿಸುವ ಹೆಸರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಬದಿಗಿರಿಸಿ, ಪ್ರತಿಭಟನೆಗೆ ಹೈಕೋರ್ಟ್ ಅನುಮತಿಸಿತ್ತು.




