ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ವಿರೋಧ:
ಮಗನ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗೆ ಸೇರಿಸಲು ನಿರ್ಧಾರ
ಕೊಪ್ಪಳ: ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ಹಿನ್ನೆಲೆ ಸರಕಾರಿ ಶಾಲೆಯಿಂದ ತಂದೆಯೊಬ್ಬರು ಮಗನ ಟಿಸಿ ಹಿಂಪಡೆದಿದ್ದಾರೆ.
ಕೊಪ್ಪಳದ ವೀರಣ್ಣ ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷರಾಗಿದ್ದು, ಶಾಲೆಯಲ್ಲಿ ಮೊಟ್ಟೆ ನೀಡುತ್ತಾರೆ ಎಂಬ ಕಾರಣಕ್ಕೆ ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಕೊಪ್ಪಳದ ರೈಲ್ವೆ ನಿಲ್ದಾಣದ ಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಮಗ ಶರಣಬಸವಕಿರಣ ನನ್ನು ಸರಕಾರಿ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ.
ಸರಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದರಿಂದ ನನ್ನ ಧರ್ಮಕ್ಕೆ ವಿರೋಧವಿದೆ. ಒಂದೆರೆಡು ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಆದರೆ ಬೇರೆ ಮಕ್ಕಳು ತಿನ್ನುವುದನ್ನು ನೋಡಿ ನನ್ನ ಮಗನೂ ತಿನ್ನಬಹುದು. ಇದೇ ಕಾರಣಕ್ಕೆ ಸರಕಾರಿ ಶಾಲೆ ಬಿಡಿಸಿದ್ದೇನೆ ಎಂದು ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷ ವಿರಣ್ಣ ತಿಳಿಸಿದ್ದಾರೆ.


ಮಗನ ಟಿಸಿ ಪಡೆದ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀರಣ್ಣ ಕೋರ್ಲಹಳ್ಳಿ ಹಂಚಿಕೊಂಡಿದ್ದು, ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.





