ಡೀಸೆಲ್ ಟ್ಯಾಂಕರ್‌ಗೆ ವಿದ್ಯುತ್ ತಂತಿಗಳು ಸ್ಪರ್ಶ:
ಹೊತ್ತಿ ಉರಿದ ಟ್ಯಾಂಕರ್
ಶಕ್ತಿನಗರ: ತೆಲಂಗಾಣ-ಕರ್ನಾಟಕ ಗಡಿಯಲ್ಲಿರುವ ಕೃಷ್ಣಾನದಿಗೆ ಅಡ್ಡಲಾಗಿರುವ ದೇವಸುಗೂರು ಸೇತುವೆ ದಾಟುತ್ತಿದ್ದ ಡೀಸೆಲ್ ಟ್ಯಾಂಕರ್‌ಗೆ ವಿದ್ಯುತ್ ತಂತಿಗಳು ಸ್ಪರ್ಶವಾಗಿ ಹೊತ್ತಿ ಉರಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್ ಬೇರೆ ಯಾವುದೇ ಅನಾಹುತ ಉಂಟಾಗಿಲ್ಲ.
ಟ್ಯಾಂಕರ್‌ನಲ್ಲಿದ್ದ ಇಂಧನ ಖಾಲಿ ಮಾಡಲಾಗಿತ್ತು. ತೆಲಂಗಾಣ ಭಾಗದಿಂದ ರಾಯಚೂರು ಕಡೆಗೆ ಟ್ಯಾಂಕರ್ ಬರುತ್ತಿತ್ತು. ಬೆಂಕಿ ಹೊತ್ತಿಕೊಂಡಿದ್ದು, ಚಾಲಕನ ಗಮನಕ್ಕೆ ಬರುತ್ತಿದ್ದಂತೆ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಲಾಗಿದೆ. ಶಕ್ತಿನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ.
ಬೆಂಕಿ ಘಟನೆಯಿಂದಾಗಿ ಸೇತುವೆಯ ಎರಡೂ ಭಾಗದಲ್ಲಿ ರಾತ್ರಿ 7 ರಿಂದ ಒಂದು ಗಂಟೆ ವಾಹನಗಳ ಸಂಚಾರವು ಸ್ಥಗಿತಗೊಂಡು ತೊಂದರೆ ಅನುಭವಿಸುವಂತಾಯಿತು. ಘಟನೆ ಕುರಿತು ಶಕ್ತಿನಗರ ಠಾಣೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.





