ಕರಾಚಿ: ಅನಿಲ ಸ್ಫೋಟದಿಂದ ಕನಿಷ್ಠ 12 ಮಂದಿ ಮೃತ್ಯು
ಕರಾಚಿ: ದಕ್ಷಿಣ ಪಾಕಿಸ್ತಾನದ ಕರಾಚಿ ನಗರದಲ್ಲಿ ಕೊಳಚೆ ವ್ಯವಸ್ಥೆಯಲ್ಲಿ ಪ್ರಬಲವಾದ ಅನಿಲ ಸ್ಫೋಟ ಸಂಭವಿಸಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಸರಾಫರ್ ನವಾಜ್ ಶೇಖ್ ಹೇಳಿಕೆಯ ಪ್ರಕಾರ, ಇಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಸಾವಿನ ಸಂಖ್ಯೆ 12 ಕ್ಕೆ ಏರಿದೆ.
ನಗರದ ಶೆರ್ಷಾ ನೆರೆಹೊರೆಯಲ್ಲಿರುವ ಬ್ಯಾಂಕ್ ಕಟ್ಟಡದ ಕೆಳಗಿರುವ ಒಳಚರಂಡಿಯಲ್ಲಿ ಸಂಗ್ರಹವಾದ ಅನಿಲದಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸ್ ವಕ್ತಾರ ಸೊಹೈಲ್ ಜೋಖಿಯೊ ಹೇಳಿದ್ದಾರೆ.
ಹತ್ತಿರದ ಕಟ್ಟಡಗಳಲ್ಲಿ ಕಿಟಕಿಗಳು ಒಡೆದು ಹೋಗಿವೆ, ಆದರೆ ಸ್ಫೋಟದ ಪರಿಣಾಮವು ಸಮೀಪದಲ್ಲಿ ನಿಲ್ಲಿಸಿದ್ದ ಹಲವಾರು ಕಾರುಗಳನ್ನು ಹಾನಿಗೊಳಿಸಿದೆ.
“ಸ್ಫೋಟದ ಕಾರಣವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಮತ್ತು ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಕರಾಚಿ ಆಡಳಿತಾಧಿಕಾರಿ ಮುರ್ತಾಜಾ ವಹಾಬ್ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಆರ್ಥಿಕ ರಾಜಧಾನಿಯಾಗಿರುವ ಕರಾಚಿಯಲ್ಲಿ ಸ್ಫೋಟದ ಹೊಡೆತಕ್ಕೆ ಹಲವು ಮಂದಿ ಗಾಯಗೊಂಡಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲಾಗುತ್ತಿದೆ.
ಪೊಲೀಸರೊಂದಿಗೆ ಇದಿ ಫೌಂಡೇಷನ್ ಸದಸ್ಯರು ಗಾಯಾಳುಗಳನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಪಾಕಿಸ್ತಾನದ ರೇಂಜರ್ ಗಳು ಮತ್ತು ಪೊಲೀಸರು ಕೂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಗಾಯಾಳುಗಳನ್ನು ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಕರಾಚಿಯ ಶೇರ್ಷಾ ಪ್ರದೇಶದ ಪರಚಾ ಚೌಕ್ ಬಳಿ ಮಧ್ಯಾಹ್ನ 1:30ಕ್ಕೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಖಾಸಗಿ ಬ್ಯಾಂಕ್‌ನ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಹೆಚ್ಚಿನ ಭಾಗ ಚರಂಡಿಯಲ್ಲಿ ಹೂತು ಹೋಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಎರಡನೇ ಸ್ಫೋಟ ಸಂಭವಿಸಿದೆ. ಆದಾಗ್ಯೂ, ಅದರ ಸಾಮರ್ಥ್ಯ ಮೊದಲನೆಯ ಸ್ಫೋಟದಷ್ಟು ಇರಲಿಲ್ಲ. ಬ್ಲಾಸ್ಟ್ ಗೆ ಕಟ್ಟಡದ ಬಳಿ ನಿಲ್ಲಿಸಿದ್ದ ವಾಹನಗಳು ತೀವ್ರವಾಗಿ ಹಾನಿಗೀಡಾಗಿವೆ. ಜೆಸಿಬಿ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.





