ಬಂಟ್ವಾಳ: ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ವಿರುದ್ಧ ಎಸ್ ಡಿ ಪಿ ಐ ಪ್ರತಿಭಟನೆ
ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಪುರಸಭಾ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರನ್ನು ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ವಿರುದ್ಧ “ಅಮಿತ್ ಶಾ ಕ್ಷಮೆ ಕೇಳಲಿ ಇಲ್ಲದಿದ್ದಲ್ಲಿ ತೊಲಗಲಿ” ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಪ್ರತಿಭಟನೆ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರ್ ಅವರ ನೇತೃತ್ವದಲ್ಲಿ ಕೈಕಂಬ ಜಂಕ್ಷನ್ ನಲ್ಲಿ ನಡೆಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ಶರೀಫ್ ವಳವೂರ್ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರನ್ನು ಅವಮಾನಿಸಿದ ಈ ಹೇಳಿಕೆಯನ್ನು ಸಹಿಸಲಾಗುವುದಿಲ್ಲ. ಎಸ್ ಡಿ ಪಿ ಐ ಯ ಈ ಹೋರಾಟ ಕ್ಷಮೆ ಕೇಳುವ ವರೆಗೂ ನಿಲ್ಲುವುದಿಲ್ಲ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅಮಿತ್ ಶಾ ಅವರ ಈ ಹೇಳಿಕೆಯು ಹಿಂದುತ್ವ ರಾಷ್ಟ್ರದ ಪರಿಕಲ್ಪನೆಯ ಭಾಗವಾಗಿದೆ. ಸಂವಿಧಾನದ ಅಡಿಯಲ್ಲಿ ಕೆಳವರ್ಗದ ಜನರಿಗೆ ಸಿಗುವ ಅಧಿಕಾರದ ಬಾಗಿದಾರಿಕೆಯನ್ನು ಫ್ಯಾಶಿಸ್ಟ್ ಶಕ್ತಿಗಳು ಎಂದಿಗೂ ಕೂಡಾ ಒಪ್ಪುವುದಿಲ್ಲ ಎಂದರು.
ಅತಿಥಿ ಭಾಷಣ ಮಾಡಿದ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಆರ್ ಎಸ್ ಎಸ್ ಈ ದೇಶದ ಮುಸ್ಲಿಮರನ್ನು ಮಾತ್ರ ಶತ್ರುಗಳಾಗಿ ಕಾಣುವುದಲ್ಲ, ದಲಿತರು, ಕ್ರಿಶ್ಚಿಯನ್ ಹಾಗೂ ರೈತಾಪಿ ವರ್ಗವನ್ನು ಕೂಡಾ ಅವರು ಶತ್ರುಗಳಾಗಿ ಕಾಣುತ್ತಿದ್ದಾರೆ, ಈ ಹೇಳಿಕೆಯು ಅದಕ್ಕೆ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಕಲ್ಲಡ್ಕ ಬ್ಲಾಕ್ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ, ಕೋಶಾಧಿಕಾರಿ ಯಾಸಿರ್ ಕಲ್ಲಡ್ಕ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಂಟ್ವಾಳ ಪುರಸಭಾ ಸಮಿತಿ ಕಾರ್ಯದರ್ಶಿ ಮುಬಾರಕ್ ಗೂಡಿನ ಬಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯಲ್ಲಿ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆಯನ್ನು ಕೂಗಲಾಯಿತು.