ಮಾದಕ ವಸ್ತು ಮಾರಾಟ: ಡ್ಯಾನಿಶ್ ಮರ್ಚೆಂಟ್ ಬಂಧನ
ಮುಂಬೈ: ದರೋಡೆಕೋರ ದಾವೂದ್ ಇಬ್ರಾಹಿಂನ ಪ್ರಮುಖ ಸಹಚರ ದಾನಿಶ್ ಚಿಕ್ನಾ ಅಲಿಯಾಸ್ ಡ್ಯಾನಿಶ್ ಮರ್ಚೆಂಟ್‌ನನ್ನು ಮಾದಕ ವಸ್ತು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿ ಡೋಂಗ್ರಿ ಪ್ರದೇಶದಲ್ಲಿ ದಾವೂದ್‌ನ ಮಾದಕ ವಸ್ತು ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದ. ಡ್ಯಾನಿಶ್ ಜೊತೆ ಆತನ ಸಹಚರ ಕಾದರ್ ಗುಲಾಮ್ ಶೇಖ್‌ನನ್ನು ಸಹ ಬಂಧಿಸಲಾಗಿದೆ.
ಮರ್ಚೆಂಟ್ ಈ ಪ್ರಕರಣದಲ್ಲಿ ಬೇಕಾಗಿರುವ ಪ್ರಮುಖ ಆರೋಪಿ ಆಗಿದ್ದ. ಕಳೆದ ತಿಂಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಆಶಿಕುರ್ ಸಾಹಿದುರ್ ರೆಹಮಾನ್ ಮತ್ತು ರೆಹಾನ್ ಶಕೀಲ್ ಅನ್ಸಾರಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು.
ನವೆಂಬರ್ 8 ರಂದು 144 ಗ್ರಾಂ ಡ್ರಗ್ಸ್‌ನೊಂದಿಗೆ ಮೆರೈನ್ ಲೈನ್ಸ್ ಸ್ಟೇಷನ್ ಬಳಿ ರೆಹಮಾನ್ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ, ಡೋಂಗ್ರಿಯಲ್ಲಿ ಅನ್ಸಾರಿಯಿಂದ ಡ್ರಗ್ಸ್ ಖರೀದಿಸಲಾಗಿದೆ ಎಂದು ಆತ ಬಾಯಿಬಿಟ್ಟಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅನ್ಸಾರಿಯನ್ನು ಬಂಧಿಸಿ ಹೆಚ್ಚುವರಿ 55 ಗ್ರಾಂ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಡ್ಯಾನಿಶ್ ಮರ್ಚೆಂಟ್ ಮತ್ತು ಇನ್ನೊಬ್ಬ ಸಹವರ್ತಿ ಖಾದಿರ್ ಫಾಂಟಾ ಎಂಬವರಿಂದ ಡ್ರಗ್ಸ್ ಸರಬರಾಜು ಮಾಡಲಾಗಿತ್ತು ಎಂದು ಅನ್ಸಾರಿ ಒಪ್ಪಿಕೊಂಡಿದ್ದ.
ಪೊಲೀಸರು ಹಲವು ವಾರಗಳಿಂದ ಮರ್ಚೆಂಟ್ ಮತ್ತು ಫಾಂಟಾಗಾಗಿ ಹುಡುಕಾಟ ನಡೆಸಿದ್ದರು. ಸುಳಿವಿನ ಮೇರೆಗೆ ಪೊಲೀಸರು ಡಿಸೆಂಬರ್ 13 ರಂದು ಡೋಂಗ್ರಿ ಪ್ರದೇಶದಲ್ಲಿ ಇಬ್ಬರೂ ಶಂಕಿತರನ್ನು ಪತ್ತೆ ಮಾಡಿದ್ದರು. ವಿಚಾರಣೆ ವೇಳೆ ಇಬ್ಬರೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.