ಕರಾವಳಿಯಲ್ಲಿ ಮುಂದುವರಿದ ಫೆಂಗಲ್ ಅಬ್ಬರ: ವಿವಿಧೆಡೆ ಹಾನಿ
ಮಂಗಳೂರು : ರಾಜ್ಯ ಕರಾವಳಿಯಲ್ಲಿ ಫೆಂಗಲ್ ಚಂಡಮಾರುತ ಅಬ್ಬರಿಸಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಾಳಿ, ಸಿಡಿಲು ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ವಿವಿಧೆಡೆ ತಡೆಗೋಡೆಗಳು ಕುಸಿತಗೊಂಡಿದೆ.
ವರ್ಷದ ಕೊನೆಯ ತಿಂಗಳಲ್ಲಿ ಏಕಾಏಕಿ ಮಳೆ ಸುರಿದ ಕಾರಣ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಕಡ ಪ್ರವಾಸಿಗರು ನೀರಿಗಿಳಿಯದಂತೆ ಸೂಚಿಸಲಾಗಿದ್ದು ಮಂಗಳವಾರವೂ ಮಳೆ ಯಬ್ಬರ ಮುಂದುವರೆದಿದೆ. ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ‘ಫೆಂಗಲ್’ ಚಂಡಮಾರುತದಿಂದಾಗಿ ಕರ್ನಾಟಕ-ಕೇರಳ ಗಡಿಯಲ್ಲಿ ಭಾರೀ ಮಳೆಯಾಗುತ್ತಿದೆ.
ಕುಂಬ್ಳೆ ಬಳಿ ರಸ್ತೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನಲ್ಲಿ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ, ಸಮುದ್ರ ತೀರಗಳಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪ್ರಕೃತಿ ವಿಕೋಪ ಉಂಟಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಎಲ್ಲೆಡೆ ಕಾರ್ಮೋಡ ಆವರಿಸಿದ್ದು ಧಾರಾಕಾರ ಮಳೆಯಾಗುತ್ತಿದೆ.




