‘ಫೆಂಗಲ್’ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರ: ಮೂವರು ಮೃತ್ಯು

ಚೆನ್ನೈ: ‘ಫೆಂಗಲ್’ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿದ ರಾಜಧಾನಿ ಚೆನ್ನೈ ತತ್ತರಿಸಿದ್ದು, ಭಾರೀ ಮಳೆಯಿಂದಾದ ಅವಾಂತರದಲ್ಲಿ ಮೂವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ನಗರದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.
90 ಕಿಮೀ ವೇಗದಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯನ್ನು ತಂದಿರುವ ಚಂಡಮಾರುತವು ಮುಂದಿನ ಕೆಲವು ಗಂಟೆಗಳಲ್ಲಿ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ ಇಲ್ಲಿವರೆಗೆ ಸೈಕ್ಲೋನ್ ನಿಂದ ಆದ ಅವಾಂತರವನ್ನು ಸಂಭಾಳಿಸಲು ಸೇನೆಯೇ ರಕ್ಷಣಾ ಕಾರ್ಯಚರಣೆಗೆ ಇಳಿದಿದೆ.
ಮೂವರು ಸಾವನ್ನಪ್ಪಿದವರಲ್ಲಿ ಒಬ್ಬರು ವಲಸೆ ಕಾರ್ಮಿಕರು ಚೆನ್ನೈನಲ್ಲಿ ಎಟಿಎಂನಿಂದ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 44 ಸೆಂ.ಮೀ ಮಳೆಯಾಗಿದ್ದು, 30 ವರ್ಷಗಳಲ್ಲೇ ಅತ್ಯಧಿಕ ಮಳೆಯಾಗಿರುವುದರಿಂದ ಪುದುಚೇರಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಗಂಭೀರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಾಡಿದ ಮನವಿಯ ಮೇರೆಗೆ ಕೇಂದ್ರಾಡಳಿತ ಪ್ರದೇಶದ ಹಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಕರೆಸಲಾಯಿತು.
ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 2 ಮತ್ತು 3 ರಂದು 35 ರಿಂದ 85 ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಭಾರಿ ಮಳೆ ಸಾಧ್ಯತೆ. ಭಾರಿ ಮಳೆ ಸಾಧ್ಯತೆ ಹಿನ್ನಲೆ ಈ ಜಿಲ್ಲೆಗಳಿಗೆ ಡಿಸೆಂಬರ್ 2, 3 ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.