March 18, 2026

ಬಂಟ್ವಾಳ: ಗ್ರೈಡರ್ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ವ್ಯಕ್ತಿ ಮೃತ್ಯು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಡೆದ ಘಟನೆ

0
istockphoto-1006045926-612x612.jpg

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿದ್ದ ಗ್ರೈಡರ್ ವಾಹನವೊಂದು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾದಚಾರಿಯೊಬ್ಬರು ಇಂದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ಪದ್ಮನಾಭ ಶೆಣೈ ಎಂಬವರು ಮೃತಪಟ್ಟಿದ್ದಾರೆ.

ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಹೆದ್ದಾರಿಯನ್ನು ಸಮತಟ್ಟು ಮಾಡುತ್ತಿದ್ದ ಗ್ರೈಡರ್ ವಾಹನ ಚಾಲಕನ ನಿರ್ಲಕ್ಷ್ಯಕ್ಕೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿಯಾಗಿತ್ತು, ಗಂಭೀರವಾಗಿ ಗಾಯಗೊಂಡಿರುವ ಅವರು ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಿಸಿರೋಡು- ಅಡ್ಡ ಹೊಳೆ ವರೆಗೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಕೆ‌ಎನ್.ಆರ್.ಸಿ.ಕಂಪೆನಿ ಗುತ್ತಿಗೆಯ ಮೂಲಕ ಕೆಲಸ ನಿರ್ವಹಿಸುತ್ತಿದೆ. ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಎಂಬಲ್ಲಿ ಕಂಪೆನಿಗೆ ಸೇರಿದ ವಾಹನ ಚಾಲಕ ರಾಜಕುಮಾರ ಯಾದವ ಎಂಬಾತ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಕರಣ ಮಾಡುತ್ತಿದ್ದ TS-36-C -6757 ನೇ ಗ್ರೈಡರ್ ವಾಹನವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೆ ಏಕಾಏಕಿ ಹಿಮ್ಮುಖವಾಗಿ ಮೆಲ್ಕಾರ್ ಕಡೆಯಿಂದ ಬೋಳಂಗಡಿ ಕಡೆಗೆ ಚಲಾಯಿಸಿಕೊಂಡು ಬಂದು, ಮೆಲ್ಕಾರ್ ಕಡೆಯಿಂದ ಬೋಳಂಗಡಿ ‌ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪದ್ಮನಾಭ ಶೆಣೈಯವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದ. ಈ ಬಗ್ಗೆ ಇವರ ತಮ್ಮನ ಮಗ ಗುರುಪ್ರಸಾದ್ ಅವರು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಘಟನೆಯಿಂದ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಒಂದು ತಿಂಗಳಿನಿಂದ ಗಂಭೀರವಾಸ್ಥೆಯಲ್ಲಿದ್ದ ಪದ್ಮನಾಭ ಅವರು ಇಂದು ಮೃತಪಟ್ಟ ಬಗ್ಗೆ ಪೋಲೀಸ್ ಮೂಲಗಳು ತಿಳಿಸಿವೆ.

ಹಲವಾರು ಅಪಘಾತ:
ಕಾಮಗಾರಿ ಆರಂಭವಾದ ಇಂದಿನವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ವೇಳೆ ಅನೇಕ ಅಪಘಾತ ಗಳು ನಡೆದಿದ್ದು ಪ್ರಾಣ ಹಾನಿಯಾದ ಘಟನೆಗಳು ಸಂಭವಿಸಿವೆ.

ಕಂಪೆನಿಯ ಬೇಜಾವಬ್ದಾರಿತನದ ಕಾಮಗಾರಿಯಿಂದ ಅನೇಕ ಜೀವಗಳು ಬಲಿಯಾಗಿವೆ. ಕಂಪೆನಿಯ ಚಾಲಕರು ದುಡುಕುತನದಿಂದ ಚಾಲನೆ ಮಾಡುತ್ತಿರುವುದೇ ಘಟನೆಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ ಕಂಪೆನಿ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಅಮಾಯಕ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅಕ್ರೋಶ ವ್ಯಕ್ತವಾಗಿದೆ.

ಮಂಗಳವಾರ ಮಧ್ಯಾಹ್ನದ ವೇಳೆ ಕಂಪೆನಿಯ ಲಾರಿ ಮೈಸೂರಿನಿಂದ ಮಂಗಳೂರಿಗೆ ಬರುವ ಕಾರೊಂದಕ್ಕೆ ಡಿಕ್ಕಿ ಹೊಡೆದು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನೊಳಗಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿರಲಿಲ್ಲ..

Leave a Reply

Your email address will not be published. Required fields are marked *

error: Content is protected !!