ಸಂವಿಧಾನ ಒಪ್ಪದ ಪೇಜಾವರ ಶ್ರೀ ದೇಶಬಿಟ್ಟು ಹೋಗಲಿ: ಆರ್. ವೆಂಕಟೇಶ್ ಸಲಹೆ
ಬೆಂಗಳೂರು: ದಸಂಸ ಅಂಬೇಡ್ಕರ್ ಸಂವಿಧಾನಶಿಲ್ಪಿಯಾಗಿ ದೇಶದ ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಎಲ್ಲ ಜಾತಿ, ಜನಾಂಗ, ಧರ್ಮ, ಲಿಂಗ, ವರ್ಣ, ವರ್ಗಗಳಲ್ಲಿನ ತಾರತಮ್ಯಗಳನ್ನು ಕಾನೂನು ಬಾಹಿರಗೊಳಿಸುವ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಇಂತಹ ಸಂವಿಧಾನ ಒಪ್ಪದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ದೇಶ ಬಿಟ್ಟು ಹೊಗಲಿ ಎಂದು ದಸಂಸ ರಾಜ್ಯ ಸಂಚಾಲಕ ಜೀವನಹಳ್ಳಿ ಆರ್. ವೆಂಕಟೇಶ್ ಸಲಹೆ ನೀಡಿದ್ದಾರೆ.
ಮಂಗಳವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಶ್ರೀಗಳು ಅಪ್ಪಟ ರಾಜಕಾರಣಿಗಳಂತೆ ಮಾತನಾಡಿದ್ದು, ಅವರಿಗೆ ಇದು ಶೋಭೆ ತರುವುದಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಮತ್ತು ಸಂವಿಧಾನ ಬರುವ ಮುಂಚೆ ಭಾರತದಲ್ಲಿ ದಲಿತರು ಮತ್ತು ಮಹಿಳೆಯರು ಅಕ್ಷರ ಕಲಿಯಲು ಅವಕಾಶವಿರಲಿಲ್ಲ. ಅಸ್ಪೃಶ್ಯತೆ, ಸತಿಸಹಗಮನ ಸೇರಿದಂತೆ ಅನಿಷ್ಟ ಪದ್ಧತಿಗಳಿದ್ದವು. ಸಂವಿಧಾನವನ್ನು ಬದುಕಿನ ಭಾಗವಾಗಿ ಪರಿಗಣಿಸಿದಾಗಲೇ ಅದರ ಅರ್ಥ ಮಹತ್ವ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.




