February 4, 2026

ಕಡಬ: ಮನೆ ಕೊಠಡಿಗೆ ಬೆಂಕಿ ಹಚ್ಚಿ ದಾಂಧಲೆಗೈದು ಚಿನ್ನಾಭರಣ ಕಳವು

0
IMG-20241117-WA0007.jpg

ಕಡಬ: ತಾಲೂಕಿನ ಇಚ್ಲಂಪಾಡಿ ಗ್ರಾಮದ ಮಾನಡ್ಕ ಎಂಬಲ್ಲಿ ಸತೀಶ್ ಹಾಗೂ ಪುರಂದರ ಎಂಬುವರ ಮನೆಗೆ ಭಾನುವಾರ ನಸುಕಿನಲ್ಲಿ ಅಪರಿಚಿತರೊಬ್ಬರು ಮನೆಯೊಳಗೆ ಪ್ರವೇಶಿಸಿ ದಾಂಧಲೆ ನಡೆಸಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುರಂದರ ಎಂಬವರ ಮನೆಯ‌ ಹಿಂಬದಿ ಗೋಡೆ ಹತ್ತಿ ಒಳಗೆ ಬಂದಿದ್ದ ಆಗಂತುಕ ನಿದ್ದೆಯಲ್ಲಿದ್ದ ಪುರಂದರ ಅವರ ಪತ್ನಿ ಮೋಹಿನಿಯ ಕತ್ತು ಹಿಸುಕಿದ್ದು, ಬೊಬ್ಬೆ ಹೊಡೆಯುತ್ತಿದ್ದಂತೆ ಅಲ್ಲೇ ಮಲಗಿದ್ದ ಪತಿ, ಮಗಳು ಎಚ್ಚರಗೊಳ್ಳುತ್ತಿದ್ದಂತೆ ಅಪರಿಚಿತ ಹಿಂಬದಿ ಬಾಗಿಲ ಮೂಲಕ ಪರಾರಿಯಾಗಿದ್ದಾನೆ.

ಮನೆಯ ವಿದ್ಯುತ್ ಸಂಪರ್ಕದ ಮೈನ್ ಸ್ವಿಚ್ ಆಫ್ ಮಾಡಲಾಗಿತ್ತು ಎಂದು ಆಪಾದಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಸತೀಶ್ ಅವರ ಮನೆಯಲ್ಲಿ ಬೆಳಕು ಕಾಣುತ್ತಿದ್ದು ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಸತೀಶ್ ಮನೆಯ ಹಿಂಬದಿ ಬಾಗಿಲು ತೆರೆದುಕೊಂಡಿದ್ದು ಮನೆಯ ಒಳಗೆ ಹೋಗಿ ಪರಿಶೀಲಿಸಿದ ವೇಳೆ ಕೊಠಡಿಯೊಂದರ ಗೋದ್ರೆಜ್‌ನಲ್ಲಿದ್ದ ದಾಖಲೆಗಳಿಗೆ ಹಾಗೂ ಬಟ್ಟೆಗಳಿಗೆ ಬೆಂಕಿ ಹಚ್ಚಿರುವುದು ಕಂಡು ಬಂದಿದೆ. ಗೋದ್ರೆಜ್‌ನಲ್ಲಿದ್ದ ಸತೀಶ್ ಅವರ ತಾಯಿಯ ಬಂಗಾರದ ಸರ, ಕಿವಿಯೋಲೆ ಕಾಣೆಯಾಗಿರುವುದಾಗಿ ಆಪಾದಿಸಲಾಗಿದೆ. ಸತೀಶ್ ಶನಿವಾರ ಸಂಜೆ ಮನೆಗೆ ಬೀಗ ಹಾಕಿ ಪತ್ನಿ, ಮಕ್ಕಳೊಂದಿಗೆ ಸಂಬಂಧಿಕರ ಮನೆಗೆ ಹೋಗಿದ್ದರು.

ಸ್ಥಳಕ್ಕೆ ಮಂಗಳೂರಿನಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು, ಅಡಿಷನಲ್ ಎಸ್ಪಿ ರಾಜೇಂದ್ರ, ಡಿಎಸ್ಪಿ ಅರುಣ್ ನಾಗೇಗೌಡ, ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್, ಸಬ್‌ಇನ್ಸ್‌ಪೆಕ್ಟರ್ ಅವಿನಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!