November 21, 2024

ಐಪಿಎಲ್ ಹರಾಜಿನಲ್ಲಿ 13 ವರ್ಷದ ಬಾಲಕ!: ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದ ಅತೀ ಕಿರಿಯ ವಯಸ್ಸಿನ ಆಟಗಾರ

0

ಬಿಹಾರ: ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ. ಕೇವಲ 13ನೇ ವಯಸ್ಸಿನಲ್ಲಿ ವೈಭವ್ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಒಂದು ವೇಳೆ ಅವರನ್ನು ಯಾವುದಾದರೂ ಫ್ರಾಂಚೈಸಿ ಖರೀದಿಸಿದರೆ, ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಐಪಿಎಲ್ ಮೆಗಾ ಹರಾಜಿಗಾಗಿ 574 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಪಟ್ಟಿಯಲ್ಲಿ 366 ಭಾರತೀಯ ಆಟಗಾರರಿದ್ದಾರೆ. ಇವರಲ್ಲಿ ವೈಭವ್ ಸೂರ್ಯವಂಶಿ ಕೂಡ ಒಬ್ಬರು. ಆದರೆ ವೈಭವ್ ಸುದ್ದಿಯಾಗಲು ಮುಖ್ಯ ಕಾರಣ ಅವರ ವಯಸ್ಸು. ಅಂದರೆ ಕೇವಲ 13 ವರ್ಷದ ಆಟಗಾರ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವೈಭವ್ ಸೂರ್ಯವಂಶಿ ಬಿಹಾರ ಮೂಲದ ಕ್ರಿಕೆಟಿಗ. 5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್ 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು ಎಂದರೆ ನಂಬಲೇಬೇಕು. ಅಲ್ಲದೆ ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. 2023 ರಲ್ಲಿ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು.

ಹಾಗೆಯೇ ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಬಾರಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಹೀಗೆ ಹಲವು ಟೂರ್ನಿಗಳಲ್ಲಿ ಕಣಕ್ಕಿಳಿದಿರುವ 13 ವರ್ಷದ ವೈಭವ್ ಸೂರ್ಯವಂಶಿ ಈವರೆಗೆ ಒಟ್ಟು 49 ಶತಕಗಳನ್ನು ಸಿಡಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿಯೇ ಇದೀಗ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಪಟ್ಟಿಯಿಂದ ಅವರ ಹೆಸರು ಐಪಿಎಲ್ ತಂಡಗಳಲ್ಲಿ ಕಾಣಿಸಿಕೊಳ್ಳಿದೆಯಾ ಎಂಬುದು ನವೆಂಬರ್ 24 ಅಥವಾ 25 ರಂದು ನಿರ್ಧಾರವಾಗಲಿದೆ.

Leave a Reply

Your email address will not be published. Required fields are marked *

error: Content is protected !!