ಮಣಿಪಾಲದಲ್ಲಿ ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಣಿಪಾಲ: ಅಂಗಡಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಗಜೇಂದ್ರಗಡ ನಿವಾಸಿ ಮಂಜುನಾಥ ಚಿದಾನಂದಪ್ಪ ನರತೇಲಿ (24) , ಉಡುಪಿ ಜಿಲ್ಲೆ ಹಟ್ಟಿಯಂಗಡಿ ಮೂಲದ ಪ್ರಸಾದ್ (22), ಮತ್ತು ಉಡುಪಿ ಜಿಲ್ಲೆ ಹಟ್ಟಿಯಂಗಡಿಯ ಕಿಶನ್ (20) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 31, 2024 ರ ರಾತ್ರಿ, ಮಣಿಪಾಲ ಪೊಲೀಸ್ ವ್ಯಾಪ್ತಿಗೆ ಒಳಪಡುವ ಶಿವಳ್ಳಿ ಗ್ರಾಮದ ಬೆಕ್ ಲೇನ್ ಬೇಕರಿ ಮತ್ತು ಈಶ್ವರ ನಗರದ ಆದಿಶಕ್ತಿ ಜನರಲ್ ಸ್ಟೋರ್ಸ್‌ಗೆ ಅಪರಿಚಿತ ಕಳ್ಳರು ನುಗ್ಗಿದ್ದರು. ದುಷ್ಕರ್ಮಿಗಳು ಪ್ರವೇಶ ಪಡೆಯಲು ಶಟರ್‌ನ ಒಂದು ಬದಿಯನ್ನು ಎತ್ತಿ, ಒಟ್ಟು ರೂ. 60,000 ನಗದು ಕಳ್ಳತನ ಮಾಡಲಾಗಿದೆ. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಣಿಪಾಲ ಪೊಲೀಸ್ ಇನ್ಸ್ ಪೆಕ್ಟರ್ ಟಿ.ವಿ.ದೇವರಾಜ್ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಅಕ್ಷಯಕುಮಾರಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಳಾದ ವಿವೇಕಾನಂದ, ಪ್ರಸನ್ನಕುಮಾರ್, ಇಮ್ರಾನ್, ರಘು, ಮಂಜುನಾಥ್ ಅವರನ್ನೊಳಗೊಂಡ ತಂಡವು 2024ರ ನವೆಂಬರ್ 6ರಂದು ಪ್ರಕರಣವನ್ನು ಭೇದಿಸಿದ್ದು, ಮಣಿಪಾಲ ಪೊಲೀಸ್ ಇನ್ಸ್ ಪೆಕ್ಟರ್ ಟಿ.ವಿ.ದೇವರಾಜ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳಿಂದ ನಗದು, 5,00,000 ರೂ ಮೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.