ಪಟಾಕಿ ಡಬ್ಬದ ಮೇಲೆ ಕೂರಿಸಿ ಆಟೋ ರಿಕ್ಷಾ ಗಿಫ್ಟ್ ಮಾಡುವುದಾಗಿ ಸ್ನೇಹಿತರ ಚಾಲೆಂಜ್: ಪಟಾಕಿ ಸಿಡಿದು ಯುವಕ ಸಾವು, 6 ಮಂದಿ ಬಂಧನ
ಬೆಂಗಳೂರು: ದೀಪಾವಳಿ ಹಬ್ಬದ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ 31ರಂದು ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಟಾಕಿ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಶಬರೀಶ್ ಎಂಬ ಯುವಕ ಸಾವನ್ನಪ್ಪಿದ್ದು, ಕೃತ್ಯವೆಸಗಿದ ಆರೋಪದಡಿ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆರು ಮಂದಿ ಯುವಕರು ಪಟಾಕಿ ಹಚ್ಚಿ, ಡಬ್ಬದಿಂದ ಮುಚ್ಚಿ, ಅದರ ಮೇಲೆ ಕೂರುತ್ತೀಯಾ ಅಂತ ಸವಾಲು ಹಾಕಿದ್ದಾರೆ. ಅದರಂತೆ ಡಬ್ಬದೊಳಗೆ ಪಟಾಕಿ ಇರಿಸಿ ಅದರ ಮೇಲೆ ಶಬರೀಶ್ ನನ್ನು ಕೂರಿಸಿದ್ದಾರೆ. ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿ ಹೋಗಿದ್ದು, ಪಟಾಕಿ ಸಿಡಿದು ಶಬರೀಷ್ ನ ಹಿಂಬದಿ ಮತ್ತು ಗುಪ್ತಾಂಗಗಳಿಗೆ ತೀವ್ರ ಗಾಯವಾಗಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಟಾಕಿ ಡಬ್ಬದ ಮೇಲೆ ಕುಳಿತರೆ ಆಟೋ ರಿಕ್ಷಾ ಕೊಡಿಸುವುದಾಗಿ ಆಮಿಷ ಒಡ್ಡಿದ ಕಾರಣ ಯುವಕ ಶಬರೀಷ್ ಈ ರೀತಿ ಮಾಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರು ಜನರನ್ನು ಬಂಧಿಸಲಾಗಿದ್ದು, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.