October 22, 2024

ಮನೆಯನ್ನೇ ಗ್ರಂಥ ಭಂಡಾರ ಮಾಡಿರುವ ಬೆಂಗಳೂರು ವಿ.ವಿ. ಕುಲಸಚಿವರು..!

0

ಅಧಿಕಾರಿಗಳಲ್ಲಿ ಸಾಹಿತ್ಯದ ಗೀಳು ಅಪರೂಪ. ಪುಸ್ತಕಗಳ ಸಂಗ್ರಹವಂತೂ ಭಾರೀ ಕಡಿಮೆ. ಇದಕ್ಕೆ ಅನ್ವರ್ಥವೆಂಬಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರ ನಿವಾಸದ ಮೊದಲ ಮಹಡಿಯ ಕಛೇರಿ ಪುಸ್ತಕ ಭಂಡಾರದಿಂದ ತುಂಬಿದೆ. ಅದರಲ್ಲೂ ವಿಶ್ವದ ಪ್ರಸಿದ್ಧ ಕೃತಿಗಳ ರಚನಾಕಾರರೇ “ಆಟೋಗ್ರಾಫ್” ಬರೆದು ಸಹಿ ಮಾಡಿರುವ ವಿಶೇಷ ಪುಸ್ತಿಕೆಗಳು ಇವರ ಸಂಗ್ರಹದಲ್ಲಿವೆ.

ಶೇಖ್ ಲತೀಫ್ ಬಡತನದಲ್ಲಿ ವಿಧ್ಯೆ ಕಲಿತು ಮೇಲೆ ಬಂದವರು. ಮೂಲತಃ ಬೆಳ್ತಂಗಡಿ ತಾಲೂಕಿನ ಉಜಿರೆಯವರು. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು. ಅರ್ಥಾತ್ ರಿಜಿಸ್ಟ್ರಾರ್. ಸರಳ, ಹಸನ್ಮುಖಿ ವ್ಯಕ್ತಿತ್ವ. ಅವರ ಪತ್ನಿ ವಿಪ್ರೋ ಸಂಸ್ಥೆಯ ಉದ್ಯೋಗಿ. ಬೆಂಗಳೂರಿನ ಕೆ.ಆರ್.ಪುರಂ ಸಮೀಪದ “ಗಾಲ್ಫ್ ವಿಲೇಜ್” ಪ್ರೆಸ್ಟೀಜ್ ಆಗಸ್ತ್ಯ ದಲ್ಲಿ ಮನೆ ಮಾಡಿದ್ದಾರೆ. ನೂರಾರು ಎಕರೆ ಸ್ಥಳದಲ್ಲಿ 500ಕ್ಕೂ ಅಧಿಕ ವಿಲ್ಲಾಗಳಿವೆ. ಅದರಲ್ಲೊಂದು ಶೇಖ್ ಲತೀಫ್ ಕುಟುಂಬದ್ದು. ಮನೆಯನ್ನೇ ಹಸಿರು ವೃಂದಾವನ ಮಾಡಿರುವ ಲತೀಫ್ ಚೊಕ್ಕವಾಗಿ ಇಟ್ಟುಕೊಂಡಿದ್ದಾರೆ. ಮನೆಯ ಮಹಡಿ ಮೇಲಿರುವ ಅವರ ಕಛೇರಿ ಪುಸ್ತಕ ಸಂಗ್ರಹಾಲಯವಾಗಿದೆ.

ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಬರೆದಿರುವ ಕೃತಿಯನ್ನು ಸ್ವತಃ ದಲೈಲಾಮಾ ಅವರೇ ಸಹಿಮಾಡಿ ಶೇಖ್ ಲತೀಫ್ ಗೆ ನೀಡಿರುವ “ದಿ ಬುಕ್ ಆಫ್ ಜೋಯ್” ಗ್ರಂಥ ಲತೀಫ್ ಅವರ ಕಪಾಟಲ್ಲಿದೆ. ಖ್ಯಾತ ಉದ್ಯಮಿ, ಸಾಹಿತಿ ಸುಧಾಮೂರ್ತಿ ಆಟೋಗ್ರಾಫ್, ಸಹಿ ಮಾಡಿರುವ “ವೈಸ್ ಎಂಡ್ ಅದರ್ ವೈಸ್-ಎ ಸಲ್ಯುಟ್ ಆಫ್ ಲೈಫ್” ಕೃತಿ ಕೂಡಾ ಇದೆ. ಇದು ಕೇವಲ ಉದಾಹರಣೆಯಷ್ಟೆ. ಇಂತಹ ಹಲವಾರು ಖ್ಯಾತನಾಮರ ಕೃತಿಗಳು ಸ್ವಸಹಿ ಸಹಿತ ಲತೀಫ್ ಬಳಿ ಇದೆ.

ಎಳೆಯದರಲ್ಲೇ ಸಾಹಿತ್ಯದ ಒಲವು ಹೊಂದಿದ್ದ ಶೇಖ್ ಲತೀಫ್ ಪದವಿ ಪಡೆಯುವಾಗ ಪುಸ್ತಕ ಓದು ಮತ್ತು ಸಂಗ್ರಹದಲ್ಲಿ ತೊಡಗಿಸಿಕೊಂಡವರು. ಈಗಾಗಲೇ ಎಲ್ಲೂ ಸಿಗದಂತಹ ಅಮೂಲ್ಯ ಮತ್ತು ಅಪರೂಪದ ಗ್ರಂಥಗಳು ಲತೀಫ್ ಅವರಲ್ಲಿದೆ. ಪ್ರೇರಣಾದಾಯಕ ಕೃತಿಗಳಿಗೆ ಹೆಚ್ಚಿನ ಉತ್ಸುಕತೆ ತೋರಿರುವುದು ಅವರ ಸಂಗ್ರಹದಿಂದ ತಿಳಿಯುತ್ತದೆ. ಕನ್ನಡದ ಸಾಹಿತಿಗಳ ಕೃತಿಗಳಿಂದ ಹಿಡಿದು ವಿಶ್ವದ ಪ್ರಸಿದ್ಧ ಬರಹಗಾರರಾದ ರೋಬರ್ಟ್ ರೇಮಂಡ್ ರಿಯೋಪೆಲ್, ಹಾರ್ವ್ ಎಕರ್ ಮುಂತಾದವರ ಇಂಗ್ಲಿಷ್ ಕೃತಿಗಳು ಶೇಖ್ ಲತೀಫ್ ರ ಸಂಗ್ರಹದಲ್ಲಿದೆ ಮಾತ್ರವಲ್ಲದೇ ಬಿಡುವು ಸಮಯದಲ್ಲಿ ಅದನ್ನವರು ಓದುತ್ತಾರೆ. ರಂಝಾನ್ ತಿಂಗಳಲ್ಲಿ ಓದುವ ಕುರ್ಆನ್ ಸಂಗ್ರಹದ ಒಂದು ಪುಸ್ತಕ ಸೆಲ್ಫ್ ಪ್ರತ್ಯೇಕವಾಗಿದೆ. ಲತೀಫ್ ಗೆ ಸಿಕ್ಕಿರುವ ಪ್ರಶಸ್ತಿಗಳು, ಗೌರವ ಪುರಸ್ಕಾರಗಳು, ನಾಡಿನ ಮಹನೀಯರ ಜೊತೆಗಿರುವ ಅಪರೂಪದ ಫೋಟೋಗಳು ಕೂಡಾ ಇಲ್ಲಿನ ತಿಜೋರಿಯಲ್ಲಿದೆ. ತಂದೆಯವರ ನೆನಪಿಗಾಗಿ ಅವರು ಬಳಸುತ್ತಿದ್ದ ಕಲಾಯಿ ಹಾಕಿತ್ತಿದ್ದ ಕಬ್ಬಿಣದ ಪರಿಕರವನ್ನು ಗೋಡೆಗೆ ಜೋಡಿಸಿಟ್ಟಿದ್ದಾರೆ. ಲತೀಫ್ ತಂದೆಯವರು ಪಾತ್ರೆಗಳಿಗೆ ಕಲಾಯಿ ಹಾಕುತ್ತಿದ್ದ ವೃತ್ತಿ ಮಾಡುತ್ತಿದ್ದರಂತೆ. ಒಟ್ಟಿನಲ್ಲಿ ಸಾಹಿತ್ಯ ಪ್ರಿಯ ಅಧಿಕಾರಿಯೊಬ್ಬರ ಮನೆ ಸಾಹಿತ್ಯದ ಅರಮನೆಯಾಗಿ ಪರಿವರ್ತನೆಗೊಂಡಿದೆ.
-ರಶೀದ್ ವಿಟ್ಲ.

Leave a Reply

Your email address will not be published. Required fields are marked *

error: Content is protected !!