ಹರಿಯಾಣ ಮತ್ತು ಜಮ್ಮು ಕಾಶ್ಮೀರ ಮತ ಎಣಿಕೆ ಆರಂಭ: ಕಾಂಗ್ರೆಸ್ ಗೆ ಆರಂಭಿಕ ಮುನ್ನಡೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ಈ ಬೆನ್ನಲ್ಲೇ ಹರಿಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ.
ಬೆಳಗ್ಗೆ 8:45ರ ವೇಳೆಗೆ ಹರಿಯಾಣದಲ್ಲಿ ಕಾಂಗ್ರೆಸ್ 63 ಬಿಜೆಪಿ23 , ಐಎನ್‌ಎಲ್‌ಡಿ 2 ಹಾಗೂ ಇತರೇ ಪಕ್ಷಗಳು 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿ ಮೈತ್ರಿ ಕೂಟ 47 ಬಿಜೆಪಿ 24, ಪಿಡಿಪಿ 2 ಹಾಗೂ ಇತರೇ ಪಕ್ಷಗಳು 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಚುನಾವಣೋತ್ತರ ಫಲಿತಾಂಶಗಳು ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿಕೂಟಕ್ಕೆ ಅಧಿಕಾರ ಎಂದು ಭವಿಷ್ಯ ನುಡಿದಿವೆ.
2019ರ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ 90 ಸ್ಥಾನಗಳಲ್ಲಿ ಬಿಜೆಪಿ 40, ಕಾಂಗ್ರೆಸ್ 31 ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) 10 ಸ್ಥಾನಗಳನ್ನು ಗೆದ್ದಿದ್ದವು. ಜೆಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು. ದುಶ್ಯಂತ್ ಚೌಟಾಲಾ ಉಪಮುಖ್ಯಮಂತ್ರಿಯಾದರು. ಮಾರ್ಚ್‌ನಲ್ಲಿ ಬಿಜೆಪಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ನಂತರ ಮೈತ್ರಿ ಕೊನೆಗೊಂಡಿತ್ತು. ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಅಧಿಕಾರ ಹಿಡಿಯಲು ಪ್ರಯತ್ನಿಸಿದೆ.