ತಲವಾರು ದಾಳಿಯ ಆರೋಪಿಗಳ ಶರಣಾಗತಿಗೆ ಪಿಎಫ್ಐ ಮುಖಂಡರ ಮೇಲೆ ಪೊಲೀಸರ ಒತ್ತಡ:
ಉಪ್ಪಿನಂಗಡಿಯ ಪಿಎಫ್ಐ ಮುಖಂಡರ ಬಿಡುಗಡೆಗೆ ಆಗ್ರಹ
ಉಪ್ಪಿನಂಗಡಿ: ಇಲ್ಲಿನ ಹಳೇಗೇಟು ಎಂಬಲ್ಲಿ ಮೀನಿನ ವ್ಯಾಪಾರಿಗಳ ಮೇಲೆ ತಲವಾರು ದಾಳಿಯ ಆರೋಪಿಗಳನ್ನು ಶರಣಾಗತಿ ಮಾಡಿಸಲು ಪಿಎಫ್ಐ ನಾಯಕರಿಗೆ ಒತ್ತಡ ತಂದು ಪಿಎಫ್ಐ ನಾಯಕರನ್ನೇ ಬಂಧಿಸಿದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ನಾಯಕರ ಬಂಧಮುಕ್ತಗೊಳಿಸುವಂತೆ ಕಾರ್ಯಕರ್ತರು ಮತ್ತು ಕುಟುಂಬಸ್ಥರು ಠಾಣೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆಯನ್ನು ದೊಡ್ಡ ಮಟ್ಟದ ಹೋರಾಟವನ್ನಾಗಿ ರೂಪಿಸಲು ಪಿಎಫ್ಐ ಸಿದ್ದತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಉಪ್ಪಿನಂಗಡಿಯ ಸ್ಥಳೀಯ ಪಿಎಫ್ಐ ನಾಯಕರುಗಳಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಮುಸ್ಲಿಯಾರ್ ಕಡವಿನಬಾಗಿಲು, ಜಕಾರಿಯಾ ಎಂಬವರನ್ನು ಪೊಲೀಸರು ಕಾರಣ ನೀಡದೆ ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ ಎಂಬುವುದು ಪಿಎಫ್ಐಯ ಆರೋಪವಾಗಿದೆ.
ಪಿಎಫ್ಐ ಮುಖಂಡರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಠಾಣೆಯ ಮುಂದೆ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು ಪೊಲೀಸರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು. ಪಿಎಫ್ಐ ನಾಯಕರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ ಕಾರ್ಯಕರ್ತರು ಠಾಣೆಯ ಎದುರು ಜಮಾವಣೆಗೊಂಡಿದ್ದರು.
ಇಂದು ಬೆಳಗ್ಗಿನಿಂದ ಪ್ರತಿಭಟನೆ ನಡೆಸುತ್ತಿದ್ದ ಪಿಎಫ್ಐ ಕಾರ್ಯಕರ್ತರ ಮನವಿಗೆ ಪೊಲೀಸರು ಸ್ಪಂದಿಸದ ಕಾರಣ ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನೆಗೆ ಸ್ವಲ್ಪ ವಿರಾಮ ಹಾಕಿದ ಕಾರ್ಯಕರ್ತರು ಸಂಜೆಯ ಹೊತ್ತಿಗೆ ಠಾಣೆಯ ಎದುರು ಬೃಹತ್ತ್ ಪ್ರತಿಭಟನೆಗೆ ಸಿದ್ದತೆಯನ್ನು ನಡೆಸುತ್ತಿದ್ದು ಈ ಹೋರಾಟದಲ್ಲಿ ಜಿಲ್ಲೆಯ ಪಿಎಫ್ಐ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಠಾಣೆಯ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.






