ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ಭಾಷಣ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದೂರು ದಾಖಲು
ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಮಹೇಶ್ ಶೆಟ್ಟಿ ತಿಮರೊಡಿ ಅವರು ಸೆ. 8ರಂದು ಉಜಿರೆಯಲ್ಲಿ ನಡೆದ ಸಾರ್ವಜನಿಕ ಗಣೇಶ ಚತುರ್ಥಿ ಹಬ್ಬದ ಸಭೆಯಲ್ಲಿ ಹಿಂದೂ ಮತ್ತು ಜೈನ ಧರ್ಮಗಳ ನಡುವೆ ವೈಮನಸ್ಸು ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೆ. 12ರಂದು ಜೈನ ಸಮುದಾಯ ದೂರು ನೀಡಿದೆ.
ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ (55) ಅವರು ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಅವಹೇಳನ ಮಾಡಿ ಅವಾಚ್ಯ ಮತ್ತು ಕೀಳು ಶಬ್ದಗಳನ್ನು ಬಳಸಿದ್ದಾರೆ.
ಯೂಟ್ಯೂಬ್ ಚಾನೆಲ್‌ಗಳಲ್ಲಿ ಇದರ ವೀಡಿಯೋಗಳು ಪ್ರಸಾರಗೊಂಡಿದ್ದು, ಆದುದರಿಂದ ಅವರ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಸಮಾರಂಭದಲ್ಲಿ ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ ಟೀಕೆ ಮಾಡಿದ್ದಲ್ಲದೆ ಜಾತಿ ಮತ್ತು ಧಾರ್ಮಿಕ ಸಾಮರಸ್ಯ ಭಂಗ ಮಾಡುವ ಉದ್ದೇಶದಿಂದ ಅವಹೇಳನಕಾರಿ ಭಾಷಣ ಮಾಡಿದ್ದಾರೆ.





