ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಘರ್ಷಣೆ, ಕಲ್ಲು ತೂರಾಟ: ಗುಂಪನ್ನು ಚದರಿಸಲು ಪೊಲೀಸರಿಂದ ಲಾಠಿಚಾರ್ಜ್
ಮಂಡ್ಯ: ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಸಂಬಂಧ ಬುಧವಾರ ರಾತ್ರಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಘರ್ಷಣೆ ಉಂಟಾಗಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದ್ದು, ಪರಿಣಾಮ ಪೊಲೀಸ್ ಸೇರಿ ಹಲವರಿಗೆ ಗಾಯಗಳಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.
ಪಟ್ಟಣ ವ್ಯಾಪ್ತಿಯ ಬದರಿಕೊಪ್ಪಲು ಗ್ರಾಮದ ಯುವಕರು ಪಟ್ಟಣದ ಹೆದ್ದಾರಿಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ಮೆರವಣಿಗೆ ಮಂಡ್ಯ ವೃತ್ತದ ದರ್ಗಾದ ಬಳಿ ಆಗಮಿಸಿದಾಗ ಕಲ್ಲುತೂರಾಟವಾಗಿ ಎರಡು ಗುಂಪಿನ ನಡುವೆ ಘರ್ಷಣೆ ಉಂಟಾಯಿತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೆಲವು ಕಿಡಿಗೇಡಿಗಳು ಅಂಗಡಿಗಳಿಗೆ ಬೆಂಕಿ ಹಚ್ಚಿ ಟೈರ್‌ಗೆ ಬೆಂಕಿಹಾಕಿದ್ದಾರೆ. ಕೂಡಲೇ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.





