ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣೇಶೋತ್ಸವ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಜಿಲ್ಲಾಧಿಕಾರಿ
ಬೆಳಗಾವಿ: ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದ್ದು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪರಿಸರ ಸ್ನೇಹಿಯಾದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದಕ್ಕೂ ಮೊದಲು ಅವರು ಗಣೇಶ ಮೂರ್ತಿಗೆ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಡಿಸಿ ಮೊಹಮ್ಮದ್ ರೋಷನ್ ಪತ್ನಿ ಅಂಕಿತಾ, ಪುತ್ರ ಹಾಗೂ ಕಚೇರಿಯ ಸಿಬ್ಬಂದಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಜುಲೈ ತಿಂಗಳಿನಲ್ಲಿ ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ನಿತೇಶ ಪಾಟೀಲ ಜಿಲ್ಲಾಧಿಕಾರಿಯಾಗಿದ್ದರು. ಸರ್ಕಾರ ಅವರನ್ನು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಮೊಹಮ್ಮದ್ ರೋಷನ್ ನೇಮಕ ಮಾಡಿತ್ತು.
2015ನೇ ಬ್ಯಾಚ್ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಮೊದಲು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. 5.7.2024 ರಂದು ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡರು.





