ಕೈದಿಗಳನ್ನು ಜೈಲಿಗೆ ಕರೆದುಕೊಂಡು ಹೋಗುವಾಗ ಪೊಲೀಸ್ ಪೇದೆ ಕುಸಿದು ಬಿದ್ದು ಮೃತ್ಯು
ಗದಗ :ಕರ್ತವ್ಯ ನಿರತ ಡಿಎಆರ್ ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ(ಆ 31) ರಂದು ನಡೆದಿದೆ.
ಡಿಎಆರ್ ಪೊಲೀಸ್ ವಾಹನ ಚಾಲಕ ಬಸವರಾಜ ವಿಠಲಾಪೂರ(41) ಮೃತರು. ಧಾರವಾಡದ ಜುಬಿಲಿ ಸರ್ಕಲ್ ಬಳಿ ವಾಹನ ಚಾಲನೆ ಮಾಡುತ್ತಿರುವ ಸಂದರ್ಭದಲ್ಲಿ ಹೃದಯ ಸ್ತಂಭನವಾಗಿದ್ದು ತತ್ ಕ್ಷಣ ಜುಬಿಲಿ ಸರ್ಕಲ್ ಬಳಿ ಜರ್ಮನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಬಸವರಾಜ ವಿಠಲಾಪೂರ ಅವರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಕಾರಾಗೃಹ ಕೈದಿಗಳ ಬದಲಾವಣೆ ಹಿನ್ನೆಲೆಯಲ್ಲಿ ಗದಗ ಸಬ್ ಜೈಲ್ ನಿಂದ 7 ಕೈದಿಗಳನ್ನು ಧಾರವಾಡ ಜೈಲಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ಪೇದೆ ನಿಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿಎಆರ್ ಡಿವೈಎಸ್ಪಿ ವಿದ್ಯಾನಂದ ನಾಯಕ ಸಂತಾಪ ಸೂಚಿಸಿದ್ದಾರೆ.





