ಮಂಗಳಪದವು: ವಾಸದ ಮನೆ ಸಮೀಪ ಕೋಳಿ ವ್ಯಾಪಾರ: ತೆರವುಗೊಳಿಸುವಂತೆ ಆರೋಗ್ಯ ಇಲಾಖೆಗೆ ದೂರು
ವಿಟ್ಲ: ವೀರಕಂಬ ಗ್ರಾಮದ ಮಂಗಳಪದವು ಎಂಬಲ್ಲಿ ಮನೆಯೊಂದಕ್ಕೆ ತಾಗಿಕೊಂಡು ಸರಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿ ಕೋಳಿ ಅಂಗಡಿ ನಡೆಸುತ್ತಿದ್ದು, ಇದರಿಂದ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆಗೆ ದೂರು ನೀಡಲಾಗಿದೆ.
ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಜೈನುದ್ದೀನ್ ಎಂಬವರ ಪತ್ನಿ ಸಫಿಯಾ ಎಂಬವರು ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ವೀರಕಂಬ ಗ್ರಾಮದ ಮಂಗಳಪದವು ಎಂಬಲ್ಲಿ ತಾಗಿಕೊಂಡು ಇರುವ ಸರ್ಕಾರಿ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕಾನೂನು ಬಾಹಿರವಾಗಿ ಒಂದು ಶೆಡ್ ನಿರ್ಮಿಸಿ ಅದರಲ್ಲಿ ಕಾನೂನು ಬಾಹಿರವಾಗಿ ಕೋಳಿ ಮಾಂಸದ ವ್ಯಾಪಾರ ನಡೆಸುತ್ತಿರುವುದಾಗಿದೆ. ಇದರಿಂದ ಬರುವ ವಿಪರಿತ ವಾಸನೆಯಿಂದ ನನಗೆ ಮನೆಯಲ್ಲಿ ವಾಸಿಸಲು ಕಷ್ಟಸಾಧ್ಯವಾಗಿರುತ್ತದೆ. ವ್ಯವಹಾರಕ್ಕೆ ಪಂಚಾಯತಿಯಿಂದ ಲೈಸನ್ಸ್ ಕೂಡಾ ಕೊಟ್ಟಿರುವುದಿಲ್ಲ ಎಂದು ತಿಳಿದು ಬಂದಿರುತ್ತದೆ. ಕಾನೂನು ಬಾಹಿರವಾಗಿ ನಿರ್ಮಿಸಿದ ಸದರಿ ಶೆಡ್ಡನ್ನು ತೆಗೆಸಿ ಅದರಲ್ಲಿರುವ ವ್ಯವಹಾರವನ್ನು ಕೂಡಾ ತೆಗೆಸಬೇಕಾಗಿ ನನ್ನ ವಿಜ್ಞಾಪನೆ ಎಂದು ಆರೋಗ್ಯ ಇಲಾಖೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ವೀರಕಂಬ ಗ್ರಾಮ ಪಂಚಾಯತ್ ಗೆ, ಜಿಲ್ಲಾಧಿಕಾರಿಗೆ ಸೇರಿದಂತೆ ವಿವಿಧ ಇಲಾಖೆಗೆ ಇದೇ ರೀತಿ ದೂರು ನೀಡಲಾಗಿದೆ ಎಂದು ತಿಳಿಸಿದ್ದು, ತಕ್ಷಣವೇ ಈ ಕೋಳಿ ಅಂಗಡಿಯನ್ನು ತೆರವು ಮಾಡದಿದ್ದರೆ, ಕೋಳಿ ತ್ಯಾಜ್ಯದಿಂದ ಮಾರಕ ರೋಗಗಳು ಬರುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ತಿಳಿಸಿದ್ದಾರೆ. ವಾಸ್ತವ್ಯದ ಮನೆ ಸಮೀಪ ಈ ರೀತಿಯಾಗಿ ಕೋಳಿ ವ್ಯಾಪಾರ ನಡೆಸುವುದು ಕಾನೂನು ಬಾಹಿರವಾಗಿ ಎಂದು ದೂರಿನ ಪ್ರತಿ ಸಹಿತ ಮಾಧ್ಯಮಗಳಿಗೆ ನೀಡಿ, ಅಳಲು ವ್ಯಕ್ತಪಡಿಸಿದ್ದಾರೆ.