ಮಂಗಳೂರು: ಚೆಕ್ ಬೌನ್ಸ್ ಪ್ರಕರಣ, ಹಿರಿಯ ನಟಿಗೆ 3 ತಿಂಗಳು ಜೈಲು ಶಿಕ್ಷೆ, 40 ಲಕ್ಷ ರೂ.ದಂಡ
ಮಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮುಂಗಾರುಮಳೆ ಖ್ಯಾತಿಯ ಹಿರಿಯ ನಟಿ ಪದ್ಮಜಾ ರಾವ್ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 40.20 ಲಕ್ಷ ದಂಡ ವಿಧಿಸಿದೆ.
ಮಂಗಳೂರಿನ ವೀರೂ ಟಾಕೀಸ್ ಸಂಸ್ಥೆ ಮಾಲೀಕ ವಿರೇಂದ್ರ ಶೆಟ್ಟಿ ಅವರಿಂದ ನಟಿ ನಟಿ ಪದ್ಮಜಾ ರಾವ್ ಅವರು ₹ 40 ಲಕ್ಷ ಕೈ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್ ನೀಡಿದ್ದರು.
ಬಳಿಕ ಚೆಕ್ ಅನ್ನು ನಗದೀಕರಿಸಲು ಬ್ಯಾಂಕ್ ಗೆ ಹಾಕಿದಾಗ, ಪದ್ಮಜಾ ರಾವ್ ಅವರ ಖಾತೆಯಲ್ಲಿ ಅಷ್ಟೊಂದು ಮೊತ್ತ ಇರಲಿಲ್ಲ ಎಂದು ಚೆಕ್ ಬೌನ್ಸ್ ಆಗಿತ್ತು. ಬಳಿಕ ವೀರೇಂದ್ರ ಶೆಟ್ಟಿ ಅವರು 15 ದಿನಗಳ ಒಳಗೆ ಸಾಲದ ಹಣ ಪಾವತಿಸುವಂತೆ 2020ರ ಜೂನ್ 30ರಂದು ಪದ್ಮಜಾ ರಾವ್ ಅವರಿಗೆ ನೋಟಿಸ್ ನೀಡಿದರೂ ಅವರು ಹಣ ಪಾವತಿಸಿರಲಿಲ್ಲ. ಬಳಿಕ ಅವರು ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.




