ನಟ ನಾಗಾರ್ಜುನ ಮಾಲೀಕತ್ವದ ಕನ್ವೆನ್ಷನ್ ಸೆಂಟರ್ ನೆಲಸಮ
ಹೈದರಾಬಾದ್: ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಜಂಟಿ ಮಾಲೀಕತ್ವದ ಎನ್-ಕನ್ವೆನ್ಷನ್ ಸೆಂಟರ್ ಅನ್ನು ಕೆರೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪದಲ್ಲಿ ನೆಲಸಮಗೊಳಿಸಲಾಯಿತು.
ಹೈದರಾಬಾದ್ ವಿಕೋಪ ಸ್ಪಂದನೆ, ಆಸ್ತಿಗಳ ನಿಗಾ ಹಾಗೂ ರಕ್ಷಣಾ ಏಜೆನ್ಸಿಯ (ಹೈದ್ರಾ) ಅಧಿಕಾರಿಗಳು ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೆ ಶನಿವಾರ ಬೆಳಿಗ್ಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ತಮ್ಮಿಡಿ ಚೆರುವು ಕೆರೆಯ ಭಾಗವಾಗಿದ್ದ ಮೂರೂವರೆ ಎಕರೆ ಭೂಮಿಯನ್ನು ಕನ್ವೆನ್ಷನ್ ಸೆಂಟರ್ ಮಾಲೀಕರು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ ಹೈದ್ರಾ (ಹೈದ್ರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್)ಗೆ ದೂರು ನೀಡಲಾಗಿತ್ತು.
ಅತಿಕ್ರಮಣದ ವ್ಯಾಪ್ತಿಯನ್ನು ಅಧಿಕಾರಿಗಳು ತನಿಖೆ ನಡೆಸಿ, ಅತಿಕ್ರಮಣವಾಗಿರುವ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಕೆಡವುತ್ತಿದ್ದಾರೆ. ಟಿಡಿಪಿ ಶಾಸಕರಾಗಿದ್ದಾಗ ಸಿಎಂ ರೇವಂತ್ ರೆಡ್ಡಿ, ವಿಧಾನಸಭೆಯಲ್ಲಿ ಎನ್ ಕನ್ವೆನ್ಷನ್ ಸೆಂಟರ್ ಅತಿಕ್ರಮಣದ ಕುರಿತು ಉಲ್ಲೇಖಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ನಾಗಾರ್ಜುನ, ವಿವಾದ ಕೋರ್ಟ್ ನಲ್ಲಿದ್ದರೂ ‘ತಡೆಯಾಜ್ಞೆಗಳಿದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿದ್ದರೂ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಕಾನೂನುಬಾಹಿರ ರೀತಿಯಲ್ಲಿ ಕೆಡವಿರುವುದು ನೋವಾಗಿದೆ ಎಂದಿದ್ದಾರೆ.