ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ ಮೇಲ್ಮನವಿ ವಜಾಗೊಳಿಸಿದ ಸಿಎಎಸ್:
ನವದೆಹಲಿ: 2024 ರ ಒಲಿಂಪಿಕ್ಸ್’ನಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಜಾಗೊಳಿಸಿದೆ ಎಂದು ವರದಿಯಾಗಿದೆ.
ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಬೆಳ್ಳಿ ಪದಕಕ್ಕಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (CAS)ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದರ ವಿಚಾರಣೆ ಈಗಾಗಲೇ ಮುಗಿದಿದೆ, ಆದರೆ ತೀರ್ಪಿನ ದಿನಾಂಕವನ್ನು ನಿರಂತರವಾಗಿ ಮುಂದೂಡಲಾಗುತ್ತಿತ್ತು. ಸಧ್ಯ ಈ ಪ್ರಕರಣದಲ್ಲಿ ಇಂದು (ಆಗಸ್ಟ್ 14) ನಿರ್ಧಾರ ಬಂದಿದೆ. ವಿನೇಶ್ ಅವರ ಮನವಿಯನ್ನ ಸಿಎಎಸ್ ವಜಾಗೊಳಿಸಿದೆ. ಇದರರ್ಥ ಈಗ ಅವರು ಬೆಳ್ಳಿ ಪದಕವನ್ನು ಪಡೆಯುವುದಿಲ್ಲ.
ಜಪಾನ್‌ನ ಯುಯಿ ಸುಸಾಕಿ ಸಹಿತ ಮೂವರು ಕುಸ್ತಿಪಟುಗಳನ್ನು ಹೆಡೆಮುರಿ ಕಟ್ಟಿದ ವಿನೇಶ್ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದರು. ಆ ಬಳಿಕ ಅಮೆರಿಕದ ಸಾರಾ ಹಿಲ್ಡ್‌ಬ್ರಾಂಡ್ ವಿರುದ್ದ ಫೈನಲ್ ಪಂದ್ಯಕ್ಕಿಂತ ಮೊದಲು ವಿನೇಶ್ ನಿಗದಿತ 50 ಕೆಜಿಗಿಂತ 100 ಗ್ರಾಂ ಹೆಚ್ಚು ತೂಕ ಇದ್ದಾರೆಂಬ ಕಾರಣಕ್ಕೆ ಒಲಿಂಪಿಕ್ಸ್‌ನಿಂದಲೇ ಅನರ್ಹರಾಗಿದ್ದರು.
ಘಟನೆಯ ನಾಟಕೀಯ ತಿರುವುಗಳಿಂದ ಆಘಾತಕ್ಕೊಳಗಾದ ವಿನೇಶ್ ಅವರು ಕಳೆದ ಅನರ್ಹತೆ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಝ್ಮನ್ ಲೋಪೆಝ್ ಅವರೊಂದಿಗೆ ತನಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನಂತಿಸಿದ್ದರು. ಲೋಪೆಝ್ ಸೆಮಿ ಫೈನಲ್‌ನಲ್ಲಿ ವಿನೇಶ್ ವಿರುದ್ದ ಸೋತಿದ್ದರೂ ಫೈನಲ್‌ಗೆ ಭಡ್ತಿ ನೀಡಲಾಗಿತ್ತು.