December 15, 2025

ವಯನಾಡ್: ಭೂ ಕುಸಿತ ದುರಂತ: ಸಾವಿನ ಸಂಖ್ಯೆ 170 ಕ್ಕೆ ಏರಿಕೆ: ಮುಖ್ಯಮಂತ್ರಿ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ವಯನಾಡಿಗೆ ಪ್ರವಾಸ

0
Santosh-Lad-In-Wayanad-2024-07-684aa2a495a3d13a052d88dc76441851-3x2.jpg

ವಯನಾಡ್: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ವಿನಾಶಕಾರಿ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 170ಕ್ಕೆ ಏರಿಕೆಯಾಗಿದೆ. 225 ಜನರು ನಾಪತ್ತೆ ಕುರಿತು ವರದಿಯಾಗಿದೆ. ನೂರಾರು ಜನರು ಗಾಯಗೊಂಡಿದ್ದು, ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ನೂರಾರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಉಳಿದಿರುವವರ ರಕ್ಷಣೆಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಇಂದು ಬೆಳಗ್ಗೆಯಿಂದ ಪುನರಾರಂಭಿಸಿವೆ.

ಸೇನಾ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇದುವರೆಗೆ ಸುಮಾರು 89 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸುಮಾರು 1,000 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಹೇಳಿದೆ. ಸಂತ್ರಸ್ತರಿಗೆ ನಿರ್ಣಾಯಕ ನೆರವು ನೀಡಲು ಹಲವಾರು ರಕ್ಷಣಾ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಸೇನೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ಭೂಕುಸಿತದಿಂದ ಬದುಕುಳಿದವರಿಗಾಗಿ ಕುಸಿದ ಮೇಲ್ಛಾವಣಿ ಮತ್ತು ಅವಶೇಷಗಳಡಿಯಲ್ಲಿ ಹುಡುಕುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.

ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್ ಲಾಡ್ ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!