ಪುನೀತ್ ಕೆರೆಹಳ್ಳಿ ಬಂಧನ ಖಂಡಿಸಿ ಎಸಿಪಿ ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಮಾಜಿ ಸಂಸದ ಪ್ರತಾಪ್ ಸಿಂಹ
ಬೆಂಗಳೂರು: ಯಶವಂತಪುರ ರೈಲ್ವೆ ಸ್ಟೇಷನ್ ನಲ್ಲಿ ರಾಜಸ್ಥಾನದಿಂದ ಬಂದಿದ್ದ ಮಾಂಸವನ್ನು ನಾಯಿ ಮಾಂಸ ಎಂದು ಆರೋಪ ಮಾಡಿದ್ದ ಹಿಂದೂ ಪರ ಸಂಘಟನೆಯ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿದ್ದರು, ನಿನ್ನೆ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ, ಆದರೆ ಈಗ ಪೊಲೀಸರು ಪುನೀತ್ ಕೆರೆ ಹಳ್ಳಿಯವರನ್ನು ಬೆತ್ತಲೆ ಮಾಡಿ ಅಪಮಾನಿಸಿ ಹಿಂಸೆ ನೀಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಎಂಟ್ರಿ ಕೊಟ್ಟಿದ್ದಾರೆ.

ಆರೋಪಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಲಾಕಪ್ ನಲ್ಲಿ ಬಟ್ಟೆ ಬಿಚ್ಚಿ ಕೂರಿಸಿ ಅಪಮಾನಿಸಿದ್ದಾರೆಂದು ಆರೋಪಿಸಿರುವ ಪ್ರತಾಪ್ ಸಿಂಹ ಎಸಿಪಿ ಚಂದನ್ ಅವರಿಗೆ “ಠಾಣೆಗೆ ಬರ್ತಿನಿ ನೀವು ಇರಬೇಕು” ಎಂದು ಬೆದರಿಕೆ ರೀತಿಯಲ್ಲಿ ಪೋಸ್ಟ್ ಹಾಕಿದ್ದಾರೆ.
ಜು. 30ರಂದು (ಮಂಗಳವಾರ) ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಅವರು, “ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ಎಸಿಪಿ ಚಂದನ್, ನಾಳೆ ಸ್ಟೇಷನ್ ಗೆ ಬರ್ತೀನಿ, ನೀವು ಇರಬೇಕು’ ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ”ನಿಮ್ಮ ಬೆದರಿಕೆಗೆಲ್ಲ ಜಗ್ಗುವವರಲ್ಲ ಕರ್ನಾಟಕ ಪೊಲೀಸ್. ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲ ಕನ್ನಡಿಗರ ಧರ್ಮ. ನಾವೆಲ್ಲಾ ಅವರೊಂದಿಗಿದ್ದೇವೆ” ಎಂದು ಹೇಳಿದ್ದಾರೆ.





