ಕಡಬ: ಕರಿಂಬಿಲ ಸರಕಾರಿ ಶಾಲೆಯಲ್ಲಿ RSS ಬೈಠಕ್, ಗುರುಪೂಜೆ ಕಾರ್ಯಕ್ರಮ
ಮಂಗಳೂರು: ಕಡಬ ತಾಲೂಕಿನ ಕರಿಂಬಿಲ ಕಿ.ಪ್ರಾ. ಶಾಲೆಯಲ್ಲಿ ಜು. 14 ರಂದು ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಬೈಠಕ್, ಗುರುಪೂಜೆ ಕಾರ್ಯಕ್ರಮ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನವನ್ನು ಕೂಡಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೊಡಬಾರದೆಂಬ ಸುತ್ತೋಲೆ ಇರುವಾಗ ಶಾಲೆಯ ಒಳಗೆಯೇ RSS ಕಾರ್ಯಕ್ರಮವನ್ನು ಮಾಡಲು ಅವಕಾಶ ಕೊಟ್ಟದ್ದು ಹೇಗೆ ಎಂದು ಸ್ಥಳೀಯ ಕೆಲವರು ಶಿಕ್ಷಣ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆ. ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಬುಲಾವ್ ಹೋಗಿ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೆಲವರು ಫೋಟೋವನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.
ಈ ಭಾವಚಿತ್ರದಲ್ಲಿ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಕರಿಂಬಿಲ ಎಂಬ ಹೆಸರಿರುವ ಕರಿಹಲಗೆ ಮತ್ತು ಕೊಟಡಿಯೊಳಗಿನ ದೃಶ್ಯಗಳು ಕಂಡುಬರುತ್ತಿವೆ.
ಸರ್ಕಾರಿ ಶಾಲೆಯಲ್ಲಿ RSS ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.