ವಿಟ್ಲ: ಮತ್ತೆ ಆರೋಗ್ಯ ಇಲಾಖೆಯ ಯಡವಟ್ಟು:
ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ 213 ದಿನಗಳ ಬಳಿಕ ಕೋವಿಡ್ ಎರಡನೇ ಲಸಿಕೆ ವರದಿ!
ವಿಟ್ಲ: ಕೋವಿಡ್ ಲಸಿಕೆ ವಿಚಾರದಲ್ಲಿ ಹಲವು ಯಡವಟ್ಟುಗಳು ನಡೆಯುತ್ತಿದೆ. ಅದರಂತೆ ವಿಟ್ಲದಲ್ಲಿ ಮತ್ತೊಮ್ಮೆ ಆರೋಗ್ಯ ಇಲಾಖೆ ಯಡವಟ್ಟು ಮಾಡಿಕೊಂಡಿದೆ. ಪ್ರಥಮ ಡೋಸ್ ಪಡೆದು ೨೧೩ ದಿನಗಳ ಬಳಿಕ ಮೃತಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಎರಡನೇ ಡೋಸ್ ನೀಡಿದ್ದೇವೆ ಎಂದು ವರದಿ ಬಂದ ಘಟನೆ ವಿಟ್ಲ ಸಮುದಾಯ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪುಣಚ ಗ್ರಾಮದ ನಡುಮನೆ ಕುಂಞಣ್ಣ ಎನ್.ರೈ ಎಂಬವರಿಗೆ 2020 ಎಪ್ರಿಲ್ 20 ರಂದು ಮೊದಲನೇ ಡೋಸ್ ಕೊವಾಕ್ಸಿನ್ ಲಸಿಕೆಯನ್ನು ನೀಡಲಾಗಿತ್ತು. 71 ವಯಸ್ಸಿನ ಅವಿವಾಹಿತರಾಗಿದ್ದ ಅವರು ಆ. 15ರಂದು ನಿಧನರಾಗಿದ್ದರು.
ಡಿ.೯ ರಂದು ಕುಂಞಣ್ಣ ರೈ ಯವರ ಅಣ್ಣನ ಪುತ್ರ ರವಿಚಂದ್ರ ಎಂಬವರಿಗೆ ವಿಟ್ಲ ಸಮುದಾಯ ಆಸ್ಪತ್ರೆಯಿಂದ ಪೋನ್ ಬಂದಿದ್ದು, ಕುಂಞಣ್ಣ ರೈವರಿಗೆ ಲಸಿಕೆ ಹಾಕಲಿಕ್ಕಿದೆ ಎಂದು ಹೇಳಿದ್ದರು. ಅವರು ಮೃತಪಟ್ಟ ವಿಷಯವನ್ನು ಅವರಿಗೆ ತಿಳಿಸಿದ್ದರೂ, ಡಿ.೧೦ ರಂದು ಅವರ ಹೆಸರಲ್ಲಿ ಕೊವಾಕ್ಸಿನ್ ಎರಡನೇ ಡೋಸ್ ನೀಡಿದ್ದ ಬಗ್ಗೆ ರಿಪೋರ್ಟ್ ಕಳುಹಿಸಲಾಗಿತ್ತು. ಪ್ರಥಮ ಡೋಸ್ ಪಡೆದ ಬರೋಬ್ಬರಿ ೨೧೩ ದಿನಗಳ ಬಳಿಕ ಇದೀಗ ಎರಡನೇ ಡೋಸ್ ನೀಡಲಾಗಿದೆ ಎಂದು ವರದಿ ಬಂದಿದೆ!
ಹಲವಾರು ಮಂದಿಗೆ ಪ್ರಥಮ ಡೋಸ್ ಮಾತ್ರ ನೀಡಲಾಗಿದ್ದರೂ, ಎರಡನೇ ಡೋಸ್ ಸಹ ನೀಡಲಾಗಿದೆ ಎಂದು ವರದಿ ಬರುತ್ತಿದೆ. ಅಂತೂ ಕೋವಿಡ್ ಲಸಿಕೆ ಅಭಿಯಾನದಲ್ಲಿ ನಮೂದಾಗುತ್ತಿರುವ ಅಂಕಿಅಂಶಗಳು ನೂರಕ್ಕೆ ನೂರು ಸಮರ್ಪಕವಲ್ಲ ಎಂಬುದನ್ನು ಅವರು ಕಳುಹಿಸುತ್ತಿರುವ ದಾಖಲೆಗಳೇ ಸಾರಿ ಹೇಳುತ್ತಿವೆ. ಸರಕಾರ ಪ್ರತೀದಿನ ರಾಜ್ಯದಲ್ಲಿ ದಾಖಲಾಗುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆಯೂ ಸಾರ್ವತ್ರಿಕವಾಗಿ ಸಂಶಯ ಬರಲು ಇಂತಹ ಎಡವಟ್ಟು ವರದಿಗಳೇ ಕಾರಣವಾಗುತ್ತಿವೆ.





