ಉಸ್ತುವಾರಿ ಸಮಿತಿ ರಚನೆ ವೇಳೆ ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿಲ್ಲ: ಉಭಯ ಜಿಲ್ಲೆಯ ಇಬ್ಬರು ಅಲ್ಪಸಂಖ್ಯಾತರಿಗೆ ಅವಕಾಶ: ಶಾಹುಲ್ ಹಮೀದ್ ಕೆ.ಕೆ
ಮಂಗಳೂರು: ದಕ್ಷಿಣ ಕನ್ನಡ-ಉಡುಪಿ ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್‌ನ ಅಭ್ಯರ್ಥಿಯ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರ ರಚಿಸಲು ರೂಪಿಸಲಾದ ಉಸ್ತುವಾರಿ ಸಮಿತಿಯನ್ನು ಶೀಘ್ರದಲ್ಲೇ ಪರಿಷ್ಕರಣೆ ಮಾಡಿ ಉಭಯ ಜಿಲ್ಲೆಯ ಇಬ್ಬರು ಅಲ್ಪಸಂಖ್ಯಾತರಿಗೆ ಅವಕಾಶ ನೀಡುವುದಾಗಿ ಕೆಪಿಸಿಸಿ ನಾಯಕರು ಭರವಸೆ ನೀಡಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್. ಕೆ.ಕೆ ತಿಳಿಸಿದ್ದಾರೆ.
ಈ ಸಮಿತಿ ರಚನೆ ವೇಳೆ ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿಲ್ಲ. ತುರ್ತಾಗಿ ಈ ಸಮಿತಿ ರಚನೆ ಮಾಡಿರುವುದರಿಂದ ಅಚಾತುರ್ಯ ಮತ್ತು ಕಣ್ತಪ್ಪಿನಿಂದ ಅಲ್ಪಸಂಖ್ಯಾತರ ಹೆಸರು ಬಿಟ್ಟು ಹೋಗಿದೆಯೇ ಹೊರತು ಅಲ್ಪಸಂಖ್ಯಾತ ಮುಖಂಡರನ್ನು ಕಡೆಗಣಿಸಿಲ್ಲ. ಕಾಂಗ್ರೆಸ್ ಪಕ್ಷದ ವಿರೋಧಿಗಳು ಈ ಬಗ್ಗೆ ಆರೋಪ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ-ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಉಪ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಮತ್ತು ಅಗತ್ಯ ಚುನಾವಣಾ ತಂತ್ರಗಳನ್ನು ರೂಪಿಸುವ ಸಲುವಾಗಿ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ದಕ್ಷಿಣ ಕನ್ನಡ, ಉಡುಪಿ ಸ್ಥಳೀಯ ಸಂಸ್ಥೆ ಉಪಚುನಾವಣೆ ಉಸ್ತುವಾರಿ ಸಮಿತಿಯನ್ನು ಕೆಪಿಸಿಸಿ ಅಧ್ಯಕ್ಷರು ರಚಿಸಿದ್ದಾರೆ. ಈ ಸಮಿತಿಯಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂಬ ಅಪಸ್ವರಗಳು ಕೇಳಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ನಾವು ಕೆಪಿಸಿಸಿ ನಾಯಕರನ್ನು ಸಂಪರ್ಕಿಸಿದಾಗ ಆಗಿರುವ ಪ್ರಮಾದವನ್ನು ಸರಿಪಡಿಸುವುದಾಗಿ ಅವರು ನಮಗೆ ಭರವಸೆ ನೀಡಿದ್ದಾರೆ. ಕೆಲವು ಕಾಂಗ್ರೆಸಿಗರು ಮಾಹಿತಿ ಕೊರತೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವು ಮಂದಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ವಿರುದ್ಧವೂ ಆರೋಪ ಮಾಡಿದ್ದಾರೆ. ಈ ಸಮಿತಿ ರಚನೆಯಲ್ಲಿ ಮಂಜುನಾಥ್ ಭಂಡಾರಿಯವರ ಯಾವ ಪಾತ್ರವೂ ಇರುವುದಿಲ್ಲ. ಈ ಸಮಿತಿ ರಚನೆ ಮಾಡಿರುವುದು ಕೆಪಿಸಿಸಿ ಅಧ್ಯಕ್ಷರು. ಮಂಜುನಾಥ್ ಭಂಡಾರಿ ವಿರುದ್ಧ ಕೇಳಿಬರುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಶಾಹುಲ್ ಹಮೀದ್ ಸ್ಪಷ್ಟಪಡಿಸಿದ್ದಾರೆ.





