ಮೊಟ್ಟೆ ವಿರೋಧಿಸುವವರಿಗೆ ಮೊಟ್ಟೆ ತಿನ್ನುವವರ ಹಣ ಆಗುತ್ತದೆಯೇ:
ಮೊಟ್ಟೆ ವಿರೋಧಿ ಸ್ವಾಮೀಜಿಗಳ ವಿರುದ್ಧ ದಲಿತ ಹಕ್ಕುಗಳ ಸಮಿತಿ ಆಕ್ರೋಶದ ಪ್ರಶ್ನೆ
ಬೆಳ್ತಂಗಡಿ: ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶಿಸಿ ಕಲ್ಯಾಣ ಕರ್ನಾಟಕದ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿರೋಧಿಸುವ ಮೂಲಕ ಕೆಲವರು ಆಹಾರ ಪದ್ದತಿಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದು ಸಂವಿಧಾನ ವಿರೋಧಿಗಳ ವ್ಯವಸ್ಥಿತ ಕೃತ್ಯ ಎಂದು ದಲಿತ ಹಕ್ಕುಗಳ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶೇಖರ್ ಲಾಯಿಲ ಟೀಕಿಸಿದ್ದಾರೆ.
ಇಡೀ ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ 98% ಮಕ್ಕಳು ದಲಿತ, ಆದಿವಾಸಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇವರೆಲ್ಲ ಮೊಟ್ಟೆ ತಿನ್ನುವವರ ಮಕ್ಕಳು. ಕೇವಲ 2% ಮಕ್ಕಳಿಗಾಗಿ 98% ಮಕ್ಕಳ ಆಹಾರದ ಮೇಲೆ ದಾಳಿ ನಡೆಸುತ್ತಿರುವುದು ಅತ್ಯಂತ ಅಪಾಯಕಾರಿ, ಸಂವಿಧಾನ ವಿರೋಧಿ ಬೆಳವಣಿಗೆ. ದೇಶದಲ್ಲಿ ಮಾಂಸಾಹಾರ ನಿಷೇಧವಿಲ್ಲ. ಆದರೂ ಕೆಲವರು ಪುಟಾಣಿ ಮಕ್ಕಳ ಆಹಾರದ ಹಕ್ಕನ್ನು ಕಸಿಯುವ ನೀಚತನ ಪ್ರದರ್ಶಿಸುತ್ತಿದ್ದಾರೆ. ನಾವು ಸಸ್ಯಹಾರಿಗಳ ಆಹಾರವನ್ನು ಪ್ರಶ್ನಿಸುವುದಿಲ್ಲ, ಆದರೂ ನಮ್ಮ ಆಹಾರದ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಎಚ್ಚರಿಕೆ ನೀಡಿರುವ ಶೇಖರ್ ಲಾಯಿಲರವರು ಕೆಲವು ಖಾವಿಧಾರಿಗಳು ಸರ್ಕಾರಕ್ಕೆ ಬೆದರಿಕೆ ಒಡ್ಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾದ ಭಯೋತ್ಪಾದನೆ ನಡೆಸುತ್ತಿದ್ದಾರೆ.
ಮೊಟ್ಟೆ ವಿರೋಧಿಸುವವರು ತಾಕತ್ತಿದ್ದರೆ ತಮ್ಮ ಮಠ- ಮಂದಿರಗಳಿಗೆ ಮೊಟ್ಟೆ ತಿನ್ನುವವರ ಹಣ ಅಗತ್ಯವಿಲ್ಲ, ಅವರ ತೆರಿಗೆ ಹಣವೂ ಅಗತ್ಯವಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ. ಸರ್ಕಾರ ಸ್ವಾಮೀಜಿ, ಮೇಲ್ಜಾತಿಗಳ ಗೊಡ್ಡು ಬೆದರಿಕೆಗೆ ಮಂಡಿಯೂರದೆ, ಬಹುಸಂಖ್ಯಾತರ ಹಕ್ಕನ್ನು ಉಳಿಸಬೇಕು. ಇಲ್ಲದಿದ್ದರೆ ಸಚಿವರ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಮೊಟ್ಟೆ ತಿನ್ನುವ ಮೂಲಕ ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.





