ಉಡುಪಿ: ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರದ ಬಣ್ಣ ಬಳಿದ ಪತ್ರಕರ್ತ:
‘ದಿಗ್ವಿಜಯ್ ನ್ಯೂಸ್’ ಚಾನೆಲಿನ ವರದಿಗಾರ ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲು
ಮಣಿಪಾಲ: ಉಡುಪಿಯ ಮಹಿಳೆಯೊಬ್ಬರಯ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಮತಾಂತರವೆಂದು ಕೋಮು ಬಣ್ಣ ಹಚ್ಚಿ ಅಶಾಂತಿ ಹರಡಲು ಪ್ರಯತ್ನಿಸಿದ್ದ ‘ದಿಗ್ವಿಜಯ್ ನ್ಯೂಸ್’ ಚಾನೆಲಿನ ಉಡುಪಿ ವರದಿಗಾರ ಶ್ರೀಕಾಂತ್ ಎಂಬವನ ವಿರುದ್ಧ ಪೊಲೀಸರು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯ ಬಡಗಬೆಟ್ಟುವಿನಲ್ಲಿ ವಾಸವಿರುವ ವೆಂಕಟೇಶ್ ಎಂಬವರ ಪತ್ನಿ ಜಯಲಕ್ಷ್ಮಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಡಿಸಂಬರ್ 6 ರಂದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.
ಆದರೆ ಈ ಆತ್ಮಹತ್ಯೆಯನ್ನು ‘ದಿಗ್ವಿಜಯ್ ನ್ಯೂಸ್’ ನ ಉಡುಪಿ ವರದಿಗಾರ ಅದನ್ನು ಮತಾಂತರ ಎಂದು ಬಿಂಬಿಸಿ ಡಿಸೆಂಬರ್ 7 ರಂದು ‘ದಿಗ್ವಿಜಯ್ ನ್ಯೂಸ್’ ಚಾನೆಲಿನಲ್ಲಿ ವಿಶೇಷ ವರದಿ ಪ್ರಸಾರವಾಗುವಂತೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮೃತ ಜಯಲಕ್ಷ್ಮಿಯ ಪತಿ ವೆಂಕಟೇಶ್ ಅವರೇ ಪೊಲೀಸ್ ದೂರು ನೀಡಿದ್ದು, ಅದರಂತೆ ಮಣಿಪಾಲ ಠಾಣೆಯಲ್ಲಿ ಆರೋಪಿ ವರದಿಗಾರ ಶ್ರೀಕಾಂತನ ವಿರುದ್ಧ ಪ್ರಕರಣ ದಾಖಲಾಗಿದೆ.





