ಬೆಳ್ತಂಗಡಿ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಬೆಳ್ತಂಗಡಿ: ನಗರದ ಖಾಸಗಿ ಕಾಲೇಜ್ ವಿದ್ಯಾರ್ಥಿಯೊರ್ವ ಸೋಮವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಮೂಡಿಗೆರೆ ನಿವಾಸಿ ಸಮರ್ಥ್ (17) ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸ್ಥಳೀಯ ಖಾಸಗಿ ಪಿಜಿಯೊಂದರಲ್ಲಿ ವಾಸವಾಗಿದ್ದನು.
ಇಂದು ಮಧ್ಯಾಹ್ನ ಪಿಜಿಯಿಂದ ಕಾಲೇಜ್ ಗೆ ಹೊರಟ ಈತ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಹಿಂದೂ ರುಧ್ರಭೂಮಿ ಸಮೀಪ ಸೋಮವತಿ ನದಿಗೆ ಈಜಾಡಲು ಇಳಿದಿದ್ದರು. ಸ್ಥಳೀಯರಲ್ಲದ ಕಾರಣ ಅಪಾಯಕಾರಿ ಗುಂಡಿಗೆ ಬಿದ್ದು ಈತ ಮುಳುಗಿದ್ದಾನೆ. ಸ್ನೇಹಿತ ಕಾಣದಿದ್ದಾಗ ಪೋಲಿಸ್ ಠಾಣೆ, ಕಾಲೇಜ್ ಉಪನ್ಯಾಸಕರಿಗೆ ಮಾಹಿತಿ ನೀಡಿದ್ದಾನೆ. ಪೋಲಿಸರು, ಉಪನ್ಯಾಸಕರ ಸಮ್ಮುಖದಲ್ಲಿ ಲಾಯಿಲ ಗ್ರಾಮದ ಮುಳುಗು ತಜ್ಞರಾದ ದಾವೂದ್ ಹಾಗೂ ಹಕೀಂ ಅವರು ಶವವನ್ನು ಮೇಲಕ್ಕೆತ್ತಿದರು. ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ತಕ್ಷಣ ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸೇರಿದಂತೆ ಕಾಲೇಜ್ ನ ಉಪನ್ಯಾಸಕರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.





