ಮಂಗಳೂರು: ಇಬ್ಬರು ಅಂತಾರಾಜ್ಯ ಕಳವು ಆರೋಪಿಗಳ ಬಂಧನ
ಮಂಗಳೂರು: ನಗರದ ಕುಲಶೇಖರದ ಕೆಎಂಎಫ್ ಡೈರಿ ಬಳಿಯಲ್ಲಿರುವ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಂತಾರಾಜ್ಯ ಕಳವು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಕೊಡಗು ವೀರಾಜಪೇಟೆ ಬೆಳ್ಳುರು ಗ್ರಾಮದ ಸಚಿನ್ ಮತ್ತು ಬಾಡಗಾ ಗ್ರಾಮ ನಿವಾಸಿ ನಿಶಾಂತ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಕುಲಶೇಖರ ಕೆಎಂಎಫ್ ಡೈರಿ ಬಳಿಯಿರುವ ಮನೆಗೆ ನುಗ್ಗಿದ ಕಳ್ಳರು 87.5 ಗ್ರಾಂ ಚಿನ್ನಾಭರಣ ಕಳವುಗೈದಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 4,29,500ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ 7 ಲಕ್ಷ ರೂ. ಬೆಲೆಬಾಳುವ ಕಾರು ಸಹಿತ 11.30 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.