ಬಿ.ಸಿ ರೋಡ್ ನಲ್ಲಿ ಬಸ್ ಹತ್ತುವ ವೇಳೆ ಮಹಿಳೆಯ ಬ್ಯಾಗಿನೊಳಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಬಂಟ್ವಾಳ: ಬಿ.ಸಿ ರೋಡಿನ ಬಸ್ ನಿಲ್ದಾಣ ಪಿಕ್ ಪಾಕೆಟ್ ತಾಣವಾಗಿ ಕಳ್ಳರ ಕೇಂದ್ರವಾಗಿ ಮಾರ್ಪಾಡು ಹೊಂದಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬಸ್ ಗೆ ಹತ್ತುವ ಮಹಿಳೆಯರ ನಗನಗದು ಕಳವು ನಡೆಯುತ್ತಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮಾಧ್ಯಮಗಳು ವರದಿ ಬಿತ್ತರಿಸಿ ಎಚ್ಚರಿಸಿದ್ದರು ಕೂಡ ಯಾವುದೇ ರೀತಿಯ ಕ್ರಮವಹಿಸದ ಪೋಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ಇಂದು ಬೆಳಿಗ್ಗೆ ಗಂಡ ಮತ್ತು ಮಗುವಿನ ಜೊತೆ ಬಸ್ ಹತ್ತುವ ವೇಳೆ ಬ್ಯಾಗಿನೊಳಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವಾದ ಪ್ರಕರಣ ವರದಿಯಾಗಿದೆ.
ಮೇ.23 ರ ಇಂದು ಬೆಳಿಗ್ಗೆ ವೇಳೆ ಬೆಳ್ತಂಗಡಿ ನಿವಾಸಿ ಶಶಿಕಲಾ ಅವರ ಸುಮಾರು 2 ಲಕ್ಷ ಮೌಲ್ಯದ ಚಿನ್ನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮನಡಿಗಲ್ ಆರ್ದಶ ನಗರ ನಿವಾಸಿ ಜಗದೀಶ ಅವರ ಪತ್ನಿ ಶಶಿಕಲಾ ಅವರು ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ಮಗುವಿನ ಜೊತೆ ಗೋಳ್ತಮಜಲು ಗ್ರಾಮದ ನೆಟ್ಲದಲ್ಲಿರುವ ತಾಯಿ ಮನೆಗೆ ಬಂದಿದ್ದರು. ಇಂದು ಮತ್ತೆ ವಾಪಸು ಗಂಡನ ಜೊತೆ ಬೆಳ್ತಂಗಡಿಗೆ ತೆರಳುವ ಉದ್ದೇಶದಿಂದ ಬಿ.ಸಿ ರೋಡಿಗೆ ಬಂದಿದ್ದು, ಬಸ್ ನಿಲ್ದಾಣದ ಸಮೀಪದ ಅಂಗಡಿಯೊಂದರಿಂದ ತಿಂಡಿಯನ್ನು ಪಡೆದುಕೊಂಡು ಬೆಳ್ತಂಗಡಿಗೆ ಪ್ರಯಾಣಿಸುವುದಕ್ಕೆ ಬಸ್ ಹತ್ತುವ ವೇಳೆ ಬ್ಯಾಗ್ ನೊಳಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವಾಗಿದೆ.
ಮಗುವಿನ ಜೊತೆ ಗಂಡ ಬಸ್ ಹತ್ತಿದ್ದು, ಅವರ ಹಿಂದೆ ಶಶಿಕಲಾ ಅವರು ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಿಂದ ಬ್ಯಾಗ್ ನೊಳಗಿದ್ದ ಚಿನ್ನದ ಪಾಕೆಟ್ ನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಬಿ.ಸಿ ರೋಡ್ ಖಾಸಗಿ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿ ಧರ್ಮಸ್ಥಳ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುವ ಸಮಯ 10:30 ಗಂಟೆಗೆ ನನ್ನ ಬ್ಯಾಗ್ನಲ್ಲಿದ್ದ ಸುಮಾರು 45 ಗ್ರಾಂ ವಿವಿಧ ಶೈಲಿಯ ಮತ್ತು ವಿವಿಧ ಮಾದರಿಯ ಹಳೆಯ ಚಿನ್ನಾಭರಣಗಳು ಕಾಣೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.




