ಸುಳ್ಯ: ಕಂದಡ್ಕ ಹೊಳೆಗೆ ತಲೆ ಕೂದಲು ಎಸೆದ ಅಂಗಡಿ ಮಾಲಕರಿಗೆ ದಂಡ ವಿಧಿಸಿದ ಆರೋಗ್ಯಾಧಿಕಾರಿ
ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ದುಗಲಡ್ಕದಲ್ಲಿ ಸಲೂನ್ ಅಂಗಡಿ ಮಾಲಕರೊಬ್ಬರು ತಲೆ ಕೂದಲನ್ನು ಕಂದಡ್ಕ ಹೊಳೆಗೆ ಎಸೆದಿದ್ದು, ಘಟನೆ ತಿಳಿದ ನ.ಪಂ. ಆರೋಗ್ಯಾಧಿಕಾರಿ ಲಿಂಗರಾಜು ದುಗಲಡ್ಕಕ್ಕೆ ಹೋಗಿ ದಂಡ ವಿಧಿಸಿದ ಹಾಗೂ ಇತರ ಅಂಗಡಿ ಮಾಲಕರ ಲೈಸೆನ್ಸ್ ತಪಾಸಣೆ ನಡೆಸಿದಾಗ ರಿನೀವಲ್ ಮಾಡದಿರುವುದು ಕಂಡು ಬಂದು ವಾರದ ಗಡುವು ನೀಡಿರುವುದಾಗಿ ತಿಳಿದು ಬಂದಿದೆ.
ದುಗಲಡ್ಕ ಪೇಟೆಯಲ್ಲಿ ಸಲೂನ್ ನಡೆಸುತ್ತಿರುವ ವಿನೋದ್ ಎಂಬವರು ಡಿ.6 ರಂದು ತಮ್ಮ ಅಂಗಡಿಯ ತಲೆ ಕೂದಲನ್ನು ಕಂದಡ್ಕ ನದಿಗೆ ಎಸೆದರೆಂದೂ ಇದನ್ನು ಕಂದಡ್ಕ ತಮಿಳು ಕಾಲನಿಯ ಮಹಿಳೆಯರು ನೋಡಿ, ಕಾಲನಿಯ ಹುಡುಗರಿಗೆ ತಿಳಿಸಿದರೆನ್ನಲಾಗಿದೆ.
ಕಾಲನಿ ಹುಡುಗರು ಸಲೂನ್ ನ ವಿನೋದ್ ರನ್ನು ಪ್ರಶ್ನಿಸಿದಾಗ ಅವರು ಆರೋಪ ನಿರಾಕರಿಸಿದರೆನ್ನಲಾಗಿದೆ. ಬಳಿಕ ಆ ಯುವಕರು ಕಂದಡ್ಕ ನದಿಗೆ ಹೋಗಿ ಕೂದಲನ್ನು ನೋಡಿದಾಗ ಅದರಲ್ಲಿ ವಿನೋದರ ಹೆಸರಿನ ಪಿಗ್ಮಿಯ ಚೀಟಿ ಇತ್ತೆಂದೂ ಆ ಯುವಕರು ತಕ್ಷಣವೇ ನ.ಪಂ. ಆರೋಗ್ಯಾಧಿಕಾರಿಗಳಿಗೆ ಫೋನಾಯಿಸಿ ವಿಷಯ ತಿಳಿಸಿದರೆನ್ನಲಾಗಿದೆ.
ಆರೋಗ್ಯಾಧಿಕಾರಿ ಲಿಂಗರಾಜರು ದುಗಲಡ್ಕಕ್ಕೆ ಹೋಗಿ ಸಲೂನ್ ಮಾಲಕರನ್ನು ವಿಚಾರಿಸಿ ಅವರಿಗೆ ಎಚ್ಚರಿಕೆ ನೀಡಿ, ರೂ.500 ದಂಡ ಹಾಕಿದರೆಂದು ತಿಳಿದು ಬಂದಿದೆ.
ಲೈಸೆನ್ಸ್ ರಿನೀವಲ್ ಆಗದೆ ವ್ಯವಹಾರ:
ಸಲೂನ್ ಗೆ ಹೋದ ಆರೋಗ್ಯಾಧಿಕಾರಿ ಲಿಂಗರಾಜರಿಗೆ ಕೆಲವು ಅಂಗಡಿ ಮಾಲಕರು ಲೈಸೆನ್ಸ್ ರಿನೀವಲ್ ಮಾಡದೇ ವ್ಯವಹಾರ ನಡೆಸುತ್ತಿರುವ ದೂರು ಬಂದು ಅವರು ದುಗಲಡ್ಕದಲ್ಲಿರುವ ಅಂಗಡಿಗಳಿಗೆ ಹೋಗಿ ಲೈಸೆನ್ಸ್ ಪರಿಶೀಲನೆ ನಡೆಸಿದರು. ಈ ವೇಳೆ ನಾಲ್ಕು ಅಂಗಡಿಗಳವರ ಲೈಸೆನ್ಸ್ ರಿನೀವಲ್ ಆಗಿತ್ತೆಂದೂ ಉಳಿದ ಅಂಗಡಿಯ ಲೈಸೆನ್ಸ್ ರಿನೀವಲ್ ಆಗಿರಲಿಲ್ಲವೆಂದು ತಿಳಿದುಬಂದಿದೆ. ಬಳಿಕ ಆರೋಗ್ಯಾಧಿಕಾರಿ ಗಳು ರಿನೀವಲ್ ಗೆ ವಾರದ ಗಡುವು ನೀಡಿ, ರಿನೀವಲ್ ಮಾಡದಿದ್ದರೆ ಬಾಗಿಲು ಹಾಕುವ ಎಚ್ಚರಿಕೆ ನೀಡಿದರೆಂದು ತಿಳಿದು ಬಂದಿದೆ.





