ಮಂಗಳೂರು: ದೇವಸ್ಥಾನಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ:
ಇಬ್ಬರು ಕುಖ್ಯಾತ ಖದೀಮರ ಬಂಧನ
ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತೆ ಹಾಗೂ ಸಿಸಿ ಕ್ಯಾಮರಾ ಇಲ್ಲದ ದೇವಸ್ಥಾನ, ದೈವಸ್ಥಾನಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರು ತರಿಕೆರೆಯ ಬೈರಪುರ ನಿವಾಸಿ ನಾಗ ನಾಯ್ಕ (55) ಹಾಗೂ ದಾವಣಗೆರೆ ಚೆನ್ನಗಿರಿ ಕಣದ ಸಾಲು ಬೀದಿಯ ಮಾರುತಿ ಸಿ.ವಿ. (33) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಟ್ಟು 28 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಗರದ ವಿವಿಧ ಠಾಣೆಗಳಲ್ಲಿ 2018ರಲ್ಲಿ ನಡೆದ ಒಂದು ಪ್ರಕರಣ ಸೇರಿದಂತೆ, ಈವರೆಗೆ ನಡೆದ 13 ದೈವಸ್ಥಾನ, ದೇವಸ್ಥಾನಗಳಲ್ಲಿ ಕಳವು ಹಾಗೂ 3 ಮನೆಗಳ ಕಳ್ಳತನ ಸೇರಿ, ಒಟ್ಟು 16 ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿರುವುದು ಬೆರಳಚ್ಚುವಿನಿಂದಲೂ ಸಾಬೀತಾಗಿದೆ. ಪ್ರಮುಖ ಆರೋಪಿ ನಾಗ ನಾಯ್ಕ ಕುಖ್ಯಾತ ಆರೋಪಿಯಾಗಿದ್ದು, ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಅವರು ಹೇಳಿದರು.





