March 17, 2026

ಉಪ್ಪಿನಂಗಡಿ: ಒಂದೇ ದಿನದಲ್ಲಿ ಬರಿದಾದ ನೇತ್ರಾವತಿ: ಆತಂಕದಲ್ಲಿ ಜನರು

0
image_editor_output_image1131070487-1713503969362

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯ ನೀರನ್ನು ಹರಿಯಬಿಡಲಾಗಿದ್ದು, ಸಂಗ್ರಹವಾಗಿದ್ದ ಹಿನ್ನೀರಿನಿಂದ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಒಂದೇ ದಿನದಲ್ಲಿ ಬರಿದಾಗಿದೆ. ಇದರಿಂದಾಗಿ ಈ ಭಾಗದ ಕೃಷಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರದವರೆಗೆ ಅಣೆಕಟ್ಟೆಯಲ್ಲಿ 4 ಮೀಟರ್ ವರೆಗೆ ಹಲಗೆ ಅಳವಡಿಸಲಾಗಿತ್ತು. ವಿಪರೀತ ಬಿಸಿಲಿನಿಂದ ನೀರು ಆವಿಯಾಗುತ್ತಿದ್ದು, ಅಣೆಕಟ್ಟೆಯಲ್ಲಿ 3.7 ಮೀಟರ್‌ ವರೆಗೆ ನೀರಿನ ಸಂಗ್ರಹವಿತ್ತು. ಗುರುವಾರ ಒಂದೇ ದಿನ 2.1 ಮೀಟರ್‌ನಷ್ಟು ನೀರನ್ನು ಹರಿಯ ಬಿಡಲಾಗಿದ್ದು, ಇದರಿಂದಾಗಿ ನದಿಯ ಒಡಲು ಬರಿದಾಗಿದ್ದು ಜನರಲ್ಲಿ ಆತಂಕ ವ್ಯಕ್ತವಾಗಿದೆ.

ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣಕ್ಕೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗಿತ್ತು. ಇದರ ಪರಿಣಾಮ ಸರಪಾಡಿ ಹಾಗೂ ಕಡೇಶ್ವಾಲ್ಯದಲ್ಲಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಣೆಕಟ್ಟೆ ಬರಿದಾಗತೊಡಗಿತ್ತು. ಜನರಿಗೆ ನೀರು ಒದಗಿಸಲು ಸಮತೋಲನ ಜಲಾಶಯವಾಗಿ ಪರಿಗಣಿಸಿರುವ ಬಿಳಿಯೂರು ಅಣೆಕಟ್ಟೆಯಿಂದ ನೀರು ಒದಗಿಸುವ ಅನಿರ್ವಾಯತೆಗೆ ಒಳಗಾದ ಸಣ್ಣ ನೀರಾವರಿ ಇಲಾಖೆ ನೀರು ಬಿಡುವ ಕ್ರಮ ಕೈಗೊಂಡಿದೆ. ಗುರುವಾರ ಸಂಜೆ ಗೇಟ್‌ಗಳನ್ನು ಮತ್ತೆ ಅಳವಡಿಸಲಾಗಿದ್ದು, ಪ್ರಸಕ್ತ ಬಿಳಿಯೂರು ಅಣೆಕಟ್ಟಿನಲ್ಲಿ 1.6 ಮೀಟರ್ ವರೆಗೆ ಮಾತ್ರ ನೀರಿದ್ದು, ಅನಿವಾರ್ಯತೆ ಉಂಟಾದರೆ ಮುಂದಿನ ದಿನಗಳಲ್ಲಿ ಅದನ್ನೂ ಬಿಟ್ಟುಕೊಡುವ ಸ್ಥಿತಿ ಉದ್ಭವಿಸಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You may have missed

error: Content is protected !!