ಗೋವಾದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಮಾಜಿ ಶಾಸಕ ರವಿ ನಾಯಕ್ ಬಿಜೆಪಿ ಸೇರ್ಪಡೆ
ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ರವಿ ನಾಯಕ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಣಜಿಯಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಅವರ ಸಮ್ಮುಖದಲ್ಲಿ ರವಿ ನಾಯಕ್ ಬಿಜೆಪಿ ಸೇರಿದ್ದಾರೆ.
ಮಂಗಳವಾರವಷ್ಟೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆಯೊಂದಿಗೆ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 3ಕ್ಕೆ ಇಳಿಕೆಯಾಗಿದೆ. 2017ರ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.
‘ಪ್ರಧಾನಿ ನರೇಂದ್ರ ಮೋದಿ ಮಾತ್ರ ದೇಶವನ್ನು ಮುಂದಕ್ಕೆ ಕೊಂಡೊಯ್ಯಬಲ್ಲರು ಮತ್ತು ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಬಲ್ಲರು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 27 ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂದು ನಾಯಕ್ ಹೇಳಿದ್ದಾರೆ. ನಾಯಕ್ ಅವರ ಮಕ್ಕಳಾದ ರಾಯ್ ಮತ್ತು ರಿತೇಶ್ ಈಗಾಗಲೇ ಬಿಜೆಪಿ ಸೇರಿದ್ದಾರೆ.





