ಮುಲ್ಕಿ: ಹಿಂದು ಯುವಕನ ಕೊಲೆ ಯತ್ನ:
ಸಂಘಪರಿವಾರದ ವಿರುದ್ಧ FIR ದಾಖಲಿಸದ ಪೊಲೀಸರು: ಪಾಪ್ಯುಲರ್ ಫ್ರಂಟ್ ಆಕ್ರೋಶ
ಮುಲ್ಕಿ: ಸಮೀಪದ ಕೊಳ್ನಾಡುವಿನಲ್ಲಿ ಹಿಂದು ಯುವಕನ ಕೊಲೆಗೆ ಯತ್ನಿಸಿದ ಸಂಘಪರಿವಾರದ ದುಷ್ಕರ್ಮಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸದ ಪೊಲೀಸರ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ವಲಯದ ಅಧ್ಯಕ್ಷ ನವಾಝ್ ಕಾವೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ರಿಶೂಲ ದೀಕ್ಷೆಯ ನಂತರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಘಪರಿವಾರದ ದುಷ್ಕರ್ಮಿಗಳಿಂದ ನಡೆಯುತ್ತಿರುವ ತ್ರಿಶೂಲ, ತಲವಾರು ದಾಳಿ ಮತ್ತು ಹಲ್ಲೆ ಘಟನೆಗಳು ಮಿತಿಮೀರುತ್ತಿವೆ. ಇದರ ಮುಂದುವರಿದ ಭಾಗವಾಗಿ ಡಿ.6ರ ರಾತ್ರಿ ಮುಲ್ಕಿ ಪರಿಸರದಲ್ಲಿ ಹಿಂದು ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿದೆ. ಈ ವೇಳೆ ಯುವಕನ ರಕ್ಷಣೆಗೆ ಧಾವಿಸಿದ ಮುಸ್ಲಿಮ್ ಯುವಕರ ಮೇಲೆಯೂ ದಾಳಿಗೆ ಯತ್ನಿಸಲಾಗಿದೆ.
ಮುಸ್ಲಿಮ್ ಯುವಕರ ಸಮಯ ಪ್ರಜ್ಞೆಯಿಂದ ಜಿಲ್ಲೆಯಲ್ಲಿ ಆಗಬಹುದಾದ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ ಹಾಗೂ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಕಾರಣ ದುಷ್ಕರ್ಮಿಗಳ ಬಂಧನವೂ ಸಾಧ್ಯವಾಗಿದೆ. ಆದರೆ ಹಿಂದು ಯುವಕನ ಹತ್ಯೆ ನಡೆಸಿ ಅದರ ಹೊಣೆಯನ್ನು ಮುಸ್ಲಿಮರ ಮೇಲೆ ಹೊರಿಸಿ, ಕೋಮು ಗಲಭೆ ನಡೆಸಲು ಷಡ್ಯಂತ್ರ ರೂಪಿಸಿದ ಸಂಘಪರಿವಾರದ ದುಷ್ಕರ್ಮಿಗಳ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸದಿರುವುದು ಆತಂಕಕಾರಿಯಾಗಿದೆ.
ದುಷ್ಕರ್ಮಿಗಳ ಪರ ಮುಲ್ಕಿ ಠಾಣಾ ಪೊಲೀಸರು ಮೃದು ಧೋರಣೆ ತಾಳಿರುವುದು ಅಕ್ಷಮ್ಯ. ಇಲ್ಲಿನ ಶಾಂತಿ ಕದಡಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕೂಡಲೇ ಕಠಿಣ ಸೆಕ್ಷನ್ ದಾಖಲಿಸಬೇಕು. ಹಿಂದು ಯುವಕನ ಹತ್ಯೆ ನಡೆಸಿ ಪರಿಸರದಲ್ಲಿ ಕೋಮು ಗಲಭೆಗೆ ಯತ್ನಿಸಿದ ಸಂಘಪರಿವಾರ ಪಿತೂರಿಕೋರರ ವಿರುದ್ಧವೂ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಮೂಲಕ ಪೊಲೀಸರು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ನಾಗರಿಕರ ಭೀತಿಯನ್ನು ಹೋಗಲಾಡಿಸಬೇಕೆಂದು ನವಾಝ್ ಕಾವೂರು ಆಗ್ರಹಿಸಿದ್ದಾರೆ.





