ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆಗೈದ ಪತಿ

ಬೆಂಗಳೂರು: ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಟೌನ್ನಲ್ಲಿ ನಡೆದಿದೆ.
ಪತಿ ಮುಬಾರಕ್(28) ಎಂಬಾತ ಪತ್ನಿ ಅರ್ಬಿಯಾ ತಾಜ್(24) ಅವರನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.
ಕೊಲೆಯಾದ ಮಹಿಳೆ, ಗಂಡನ ಕಿರುಕುಳಕ್ಕೆ ಬೇಸೆತ್ತು ತಿಂಗಳ ಹಿಂದೆ ತವರಿಗೆ ಹೋಗಿದ್ದರು. ಈ ಹಿನ್ನಲೆ ವಾರದ ಹಿಂದೆಯಷ್ಟೇ ಪತ್ನಿ ಮನೆಗೆ ಬಂದಿದ್ದ ಆರೋಪಿ ಪತಿ ಮುಬಾರಕ್, ಅರ್ಬಿಯಾ ತಾಜ್ಳನ್ನು ಮನೆಗೆ ಬರಲು ಕರೆದಿದ್ದಾನೆ.
ಆದರೆ, ಗಂಡನ ಮನೆಗೆ ಹೋಗಲು ಪತ್ನಿ ಹಿಂದೇಟು ಹಾಕಿದ್ದಾಳೆ. ಬಳಿಕ ಮುಬಾರಕ್ ಹಾಗೆಯೇ ಹೋಗಿದ್ದ. ಇಂದು ವಾಪಸ್ ತನ್ನ ಮನೆಗೆ ಬರುವಂತೆ ಪತಿ ಬಂದು ಒತ್ತಾಯಿಸಿದ್ದಾನೆ. ಮತ್ತೆ ಬರಲು ನಕಾರ ಮಾಡಿದ ಹಿನ್ನೆಲೆ ಪತ್ನಿಯನ್ನ ಮಾರಕಾಸ್ತ್ರದಿಂದ ಕೊಲೆಗೈದಿದ್ದಾನೆ.