ಪುತ್ತೂರು ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು ಪ್ರಕರಣ: ತಮಿಳುನಾಡು ಮೂಲದ ಅಂತಾರಾಜ್ಯ ಕಳ್ಳಿಯ ಬಂಧನ
ಪುತ್ತೂರು: ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಾ.12 ರಂದು ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣವನ್ನು ಪುತ್ತೂರು ನಗರ ಠಾಣಾ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿ ಸದ್ರಿ ಪ್ರಕರಣದ ಆರೋಪಿಯಾದ ತಮಿಳುನಾಡು ಮೂಲದ, ಅಂತರ್ ರಾಜ್ಯ ನಟೋರಿಯಸ್ ಕಳ್ಳಿ ಈಸ್ಟರಿ ಎಂಬಾಕೆಯನ್ನು ವಶಕ್ಕೆ ಪಡೆದು, ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಭೇದಿಸುವಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯಂತ್ ಮತ್ತು ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಸತೀಶ್ ಜಿ ಜೆ, ರವರ ಸಾರಥ್ಯದಲ್ಲಿ ಪುತ್ತೂರು ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ನಂದಕುಮಾರ್ ಎಮ್ ಎಮ್ ಹಾಗೂ ಸುಬ್ರಹ್ಮಣ್ಯ ಹೆಚ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್ ಸಿ ಸ್ಕರಿಯ ಎಮ್ ಎ. ಹೆಚ್ ಸಿ ಕೆ ಬಸವರಾಜ, ಹೆಚ್ ಸಿ ಜಗದೀಶ್, ಹೆಚ್ ಸಿ ಸುಬ್ರಹ್ಮಣ್ಯ, ಪಿಸಿ ವಿನಾಯಕ ಎಸ್ ಬಾರ್ಕಿ, ಪಿಸಿ ಶರಣಪ್ಪ ಪಾಟೀಲ್, ಮಪಿಸಿ ರೇವತಿ ಹಾಗೂ ದ.ಕ ಜಿಲ್ಲಾ ಗಣಕ ಯಂತ್ರ ವಿಭಾಗದ ಎಹೆಚ್ ಸಿ ಸಂಪತ್ ಮತ್ತು ಸಿಪಿಸಿ ದಿವಾಕರ್ ರವರು ಭಾಗವಹಿಸಿರುತ್ತಾರೆ.




