September 19, 2024

ಸ್ವಾತಂತ್ರ್ಯ ಭಾರತದಲ್ಲಿ ಆರೆಸ್ಸೆಸ್ ಭಯೋತ್ಪಾದಕತೆ ಅತ್ಯಂತ ಅಪಾಯಕಾರಿ: ಸಿಪಿಐ(ಎಂ) ಕಾರ್ಯದರ್ಶಿ ಶಿವಕುಮಾರ್ ಆರೋಪ: ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಖಂಡಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ

0

ಬೆಳ್ತಂಗಡಿ: ಸ್ವಾತಂತ್ರ್ಯ ಭಾರತದಲ್ಲಿ ಸಂಘಪರಿವಾರದ ಭಯೋತ್ಪಾದಕತೆ ಅತ್ಯಂತ ಅಪಾಯಕಾರಿಯಾಗಿದೆ. ಸುಳ್ಳು ವಿಚಾರಗಳನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯದ ಮೇಲೆ ನಿರಂತರ ಧಾಳಿ ಮಾಡುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು.

ಅವರು ಡಿಸೆಂಬರ್ 6 ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿ, ಸಂವಿಧಾನಬದ್ದ ರಕ್ಷಣೆ ನೀಡಲು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ನಡುವೆ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನರೇಂದ್ರ ಮೋದಿ ಸರ್ಕಾರದಡಿಯಲ್ಲಿ ಆರೆಸ್ಸೆಸ್ ಗೂಂಡಾಗಳು ಅನಾಗರಿಕತನದಿಂದ ವರ್ತಿಸುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಧಾಳಿ, ದೌರ್ಜನ್ಯ, ಹಿಂಸೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು ದೇಶದಲ್ಲಿ ಹಿಂದುತ್ವದ ಭಯೋತ್ಪಾದಕತೆ ಅಪಾಯಕಾರಿಯಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಬೆಳೆಯುತ್ತಿರುವುದು ಆತಂಕಕಾರಿಯಾಗಿದೆ ಎಂದರು.

ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯ ಶೇಖರ್ ಲಾಯಿಲ ಮಾತನಾಡುತ್ತಾ ಸಂಘಪರಿವಾರ ಹಿಂದುತ್ವದ ಹೆಸರಿನಲ್ಲಿ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಆಕ್ರಮಣಕಾರಿಯಾಗಿ ಧಾಳಿ ನಡೆಸುತ್ತಿದೆ. ಗೋಹತ್ಯೆ ಹೆಸರಿನಲ್ಲಿ ಅಲ್ಪಸಂಖ್ಯಾತ, ದಲಿತ ಸಮುದಾಯದ ಮೇಲೆ ದಾಳಿ ನಡೆಸುವ ಸಂಘಪರಿವಾರಕ್ಕೆ ತಾಕತ್ತಿದ್ದರೆ ಮೊದಲು ನರೇಂದ್ರ ಮೋದಿ ಸರ್ಕಾರದ ನೇತೃತ್ವದಲ್ಲಿ ಬಿಜೆಪಿ, ಸಂಘಪರಿವಾರದ ನಾಯಕರ ಮಾಲೀಕತ್ವದಲ್ಲಿ ನಡೆಯುತ್ತಿರುವ ಗೋಮಾಂಸ ರಪ್ತು ಕಂಪನಿಗಳನ್ನು ನಿಷೇಧಿಸಲು ಹೋರಾಟ ನಡೆಸಲಿ ಎಂದು ಸವಾಲು ಹಾಕಿದರು.

ಲವ್ ಜಿಹಾದ್ ದೇಶದಲ್ಲಿ ಇಲ್ಲ ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಸಂಸತ್ ಅಧಿವೇಶನದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದರೂ ಕೂಡ ಸಂಘಪರಿವಾರದ ಹಿಂದುತ್ವ ಕಾರ್ಯಕರ್ತರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು RSS ಕಾರ್ಯಕರ್ತರಿಗೆ ನರೇಂದ್ರ ಮೋದಿ ಸರ್ಕಾರದ ಮೇಲೆ ನಂಬಿಕೆ ಇಲ್ಲದಿರುವುದು ದುರಂತ ಎಂದು ಛೇಡಿಸಿದರು. ಮತಾಂತರದ ಹೆಸರಿನಲ್ಲಿ ಚರ್ಚುಗಳ ಮೇಲೆ , ಕ್ರೈಸ್ತ ಧರ್ಮಗುರುಗಳ ಮೇಲೆ ಧಾಳಿ ನಡೆಸಲಾಗುತ್ತಿದೆ. ಮತಾಂತರದ ಹೆಸರಿನಲ್ಲಿ ದೇಶದ ಸಂವಿಧಾನ ನೀಡಿದ ಹಕ್ಕುಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು ಹಿಂದುತ್ವದ ಹೆಸರಿನಲ್ಲಿ ನಡೆಯುವ ಗೂಂಡಾಗಿರಿ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.

ಡಿಸೆಂಬರ್ 6 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನದಂದೇ ಐತಿಹಾಸಿಕ ಬಾಬರಿ ಮಸೀದಿ ಧ್ವಂಸಗೊಳಿಸುವ ಮೂಲಕ ದೇಶದಲ್ಲಿ ವಿಜಯೋತ್ಸವದ ಆಚರಿಸುವ ಅನಾಗರಿಕತೆಯನ್ನು ಆರೆಸ್ಸೆಸ್ ಮಾಡುತ್ತಿದೆ ಎಂದು ಟೀಕಿಸಿದ ಶೇಖರ್ ಲಾಯಿಲ , ಅಂಬೇಡ್ಕರ್ ಪರಿ ನಿರ್ವಾಣ ದಿನವನ್ನು ಇಡೀ ಜಗತ್ತಿನಲ್ಲಿ ವಿಜಯೋತ್ಸವ ಆಚರಿಸುವ ಮೂಲಕ ಆರೆಸ್ಸೆಸ್ , ಬಿಜೆಪಿ , ಸಂಘಪರಿವಾರ ಅಂಬೇಡ್ಕರ್ ಅವರ ಸಿದ್ದಾಂತಕ್ಕೆ ಸಮಾದಿ ಕಟ್ಟಲು ಹೊರಟಿದೆ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾದ ವಸಂತ ನಡ , ನ್ಯಾಯವಾದಿ ಸುಕನ್ಯಾ ಹೆಚ್, ಮುಖಂಡರಾದ ನಿಲೇಶ್ ಹೆಚ್ ಪೆರಿಂಜೆ, ಮಧುಸೂದನ್ ಕಳೆಂಜ, ಅಜಿ ಜೋಸೆಫ್ ವೇಣೂರು, ಜಯನ್ ಮುಂಡಾಜೆ, ಮುದರ ಬಾರ್ಯ, ಸಂಜೀವ ಆರ್ ಉಜಿರೆ, ಜೋಸೆಫ್ ಕಾಯರ್ತಡ್ಕ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಘಟನಾ ಕಾರ್ಯದರ್ಶಿ ನಾರಾಯಣ ಆಲಂಗಾಯಿ, ಸಮುದಾಯ ಸಂಘಟನೆಯ ಸುಜೀತ್ ಉಜಿರೆ ಮೊದಲಾದವರು ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!