ಅಶ್ರಫ್ ಕಲಾಯಿಯನ್ನು ಕಳುಹಿಸಿದ ಜಾಗಕ್ಕೆ ನಿನ್ನನ್ನೂ ಕಳುಹಿಸುತ್ತೇವೆ” ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿಗೆ ಕೊಲೆ ಬೆದರಿಕೆ
ಬಂಟ್ವಾಳ: ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ, ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಅವರಿಗೆ ಭಜರಂಗ ದಳದ ಕಾರ್ಯಕರ್ತರು ಹೆಸರಿನಲ್ಲಿ ಅಂಚೆ ಮೂಲಕ ಕೊಲೆ ಬೆದರಿಕೆ ಪತ್ರ ರವಾನಿಸಿರುವ ಕಿಡಿಗೇಡಿಗಳು, ಅಶ್ರಫ್ ಕಲಾಯಿಯನ್ನು ಕಳುಹಿಸಿದ ಜಾಗಕ್ಕೆ ನಿನ್ನನ್ನೂ ಕಳುಹಿಸಲಾಗುವುದು ಮತ್ತು ನಿನ್ನ ಕಚೇರಿಗೆ ಬಾಂಬ್ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಕೊಲೆ ಬೆದರಿಕೆ ಪತ್ರದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಮುನೀಶ್ ಅಲಿ ಅವರು, ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಕಿಡಿಗೇಡಿಗಳ ಪತ್ತೆಗೆ ಕ್ರಮ ಕೈಗೊಂಡಿದೆ.
ಫೆಬ್ರವರಿ 17ರಂದು ಅಂಚೆ ಮೂಲಕ ಭಜರಂಗ ದಳದ ಕಾರ್ಯಕರ್ತರು ಎಂಬ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ಕಚೇರಿಯ ವಿಳಾಸಕ್ಕೆ ಬಂದಿದೆ. ಪತ್ರದಲ್ಲಿ ಬಂಟ್ವಾಳದ ಕಾಲೇಜು ಒಂದರ ಅಂತಿಮ ವರ್ಷದ ಬಿ.ಎಸ್ಸಿ ಪದವಿ ವಿದ್ಯಾರ್ಥಿಗಳಾದ ನಿತೇಶ್ ಕೆ., ಜಿತೇಶ್ ಕೆ., ವಿಠಲ ನಾಯ್ಕ್, ಜೇಸಿ ಪಿಂಟೋ ಅವರ ಮಗನಾದ ಕೌಶಿಕ್ ಪಿಂಟೋ, ಮೇಕನ್ ಪಿಂಟೋ ಕನಪಾಡಿ, ರಾಗನ್ ಪಿಂಟೋ ಕನಪಾಡಿ ಮತ್ತು ಲೋಕೇಶ್ (ಹರೀಶ್) ಎಂಬವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪತ್ರ ಬರೆದಿರುವ ಕಿಡಿಗೇಡಿಗಳು, 2017ರಲ್ಲಿ ಕೊಲೆಯಾದ ಅಶ್ರಫ್ ಕಲಾಯಿಯನ್ನು ಕಳುಹಿಸಿದ ಜಾಗಕ್ಕೆ ನಿನ್ನನ್ನೂ ಕಳುಹಿಸಲಾಗುವುದು. ಅಲ್ಲದೆ ನಿನ್ನ ಕಚೇರಿಗೆ ಬಾಂಬ್ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಮುನೀಶ್ ಅಲಿ ದೂರಿನಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ, ಕಲ್ಲಡ್ಕ ಪ್ರಭಾಕರ ಭಟ್, ಬಜರಂಗದಳದ ಸಂಚಾಲಕ, ಮಾಹಿತಿದಾರರು ಕಳ್ಳಿಗೆ ಗ್ರಾಮ ಸಹಿತ ಹಲವು ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿರುವ ಮುನೀಶ್ ಅಲಿ ಅವರು, ಪತ್ರ ರವಾನಿಸಿರುವ ಹಾಗೂ ಇದರ ಹಿಂದೆ ಇರುವ ಎಲ್ಲರನ್ನೂ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಂಡಿದೆ.




