February 3, 2026

ಮಂಗಳೂರು: ಜನ ಯಾಕೆ ಗೆಲ್ಲಿಸಬೇಕು ಕಟೀಲ್ ಅವರೇ, ಕರಂದ್ಲಾಜೆ ಅವರೇ, ಬನ್ನಿ ಜಿಲ್ಲೆಯ ಸ್ವಾಭಿಮಾನಿ ಜನತೆಗೆ ಉತ್ತರ ಕೊಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

0
IMG-20240217-WA0018.jpg


ಮಂಗಳೂರು: ನಿಮ್ಮನ್ನು ಮಂಗಳೂರು, ಉಡುಪಿ ಜನ ಯಾಕೆ ಗೆಲ್ಲಿಸಬೇಕು ಕಟೀಲ್ ಅವರೇ, ಕರಂದ್ಲಾಜೆ ಅವರೇ, ಬನ್ನಿ ಜಿಲ್ಲೆಯ ಸ್ವಾಭಿಮಾನಿ ಜನತೆಗೆ ಉತ್ತರ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಳಿನ್ ಕುಮಾರ್ ಕಟೀಲ್ ಅವರೇ ಒಂದೇ ಒಂದು ದಿನ ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿದಿಯೇನಪ್ಪಾ? ತಾಯಿ ಶೋಭಾ ಕರಂದ್ಲಾಜೆ ನೀನಾದ್ರೂ ರಾಜ್ಯದ ಪರವಾಗಿ ಒಂದೇ ಒಂದು ಮಾತಾಡಿದ್ದೀಯೇನಮ್ಮಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ನಿಮ್ಮನ್ನು ಮಂಗಳೂರು, ಉಡುಪಿ ಜಿಲ್ಲೆಯ ಸ್ವಾಭಿಮಾನಿ ಜನತೆ ಏಕೆ ಗೆಲ್ಲಿಸಬೇಕು ಎಂದು ಕೇಳಿದರು.

 ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ. ಮೋದಿಯವರು ಇದುವರೆಗೂ ಹೇಳಿದ್ದರಲ್ಲಿ ಯಾವುದನ್ನಾದರೂ ಈಡೇರಿಸಿದ್ದಾರಾ? ಜನರ ಬದುಕಿಗೆ ನೆರವಾಗು, ದೇಶದ ಮಕ್ಕಳು-ಯುವಜನರ ಬದುಕು-ಭವಿಷ್ಯಕ್ಕೆ ಅನುಕೂಲ ಆಗುವ ಒಂದೇ ಒಂದನ್ನಾದರೂ ಈಡೇರಿಸಿದ್ದಾರಾ? ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಜನಸ್ತೋಮದ ಎದುರು ಪ್ರಶ್ನಿಸಿದರು.

ದಕ್ಷಿಣಕನ್ನಡದ ಜನತೆಗೆ ರಾಜಕೀಯ ಪ್ರಜ್ಞಾವಂತಿಕೆ ಹೆಚ್ಚಾಗಿದೆ. ಸತ್ಯ ಹೇಳುವವರು ಮತ್ತು ಸುಳ್ಳು ಹೇಳುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞಾವಂತಿಕೆಯೂ ಇದೆ. ಈ ಕಾರಣಕ್ಕೆ ಮಂಗಳೂರಿನಲ್ಲೇ ಮೊದಲ ಸಭೆ ಮಾಡುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದರು.‌


ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ, ಜಗಳ ತಂದಿಟ್ಟಿರುವುದು ಬಿಟ್ಟರೆ ಜನ ಸಾಮಾನ್ಯರ ಬದುಕಿಗೆ ಅನುಕೂಲ ಆಗುವ ಒಂದೇ ಒಂದು ಕಾರ್ಯಕ್ರಮವನ್ನು ಕಳೆದ ಹತ್ತು ವರ್ಷಗಳಲ್ಲಿ ಜಾರಿ ಆಗಿದೆಯಾ? ಡೀಸೆಲ್-ಪೆಟ್ರೋಲ್ ಬೆಲೆ ಕಡಿಮೆ ಆಯ್ತಾ? ಅಡುಗೆ ಗ್ಯಾಸ್ ಬೆಲೆ ಕಡಿಮೆ ಆಗಿದೆಯಾ? ಕಪ್ಪು ಹಣ ವಾಪಾಸ್ ಬಂದಿದೆಯಾ? ಅಚ್ಛೆ ದಿನ್ ಯಾರಿಗಾದರೂ ಬಂದಿದೆಯಾ? ಹೇಳಿ ಎಂದು ನೆರೆದಿದ್ದ ಜನಸ್ತೋಮಕ್ಕೆ ಮುಖ್ಯಮಂತ್ರಿಗಳು ಕೇಳಿದರು.
ಜನರು ಇಲ್ಲ, ಇಲ್ಲ, ಏನಿಲ್ಲ ಎಂದು ಕೂಗಿದರು.

Leave a Reply

Your email address will not be published. Required fields are marked *

error: Content is protected !!