ಮಂಗಳೂರು: ಗ್ಯಾಂಗ್ ವಾರ್ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ನಗರದ ಕುದ್ರೋಳಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಮೂರು ತಲ್ವಾರು, ಮೂರು ದ್ವಿಚಕ್ರ ವಾಹನ ಮತ್ತು ಒಂದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
ನವನೀತ್ ಅಶೋಕನಗರ, ಹೇಮಂತ್ ಹೊಯ್ಗೆಬೈಲ್, ದೀಕ್ಷಿತ್ ಬೋಳೂರು ಮತ್ತು ಇವರು ತಲೆಮರೆಸಿಕೊಳ್ಳಲು ನೆರವು ನೀಡಿದ್ದ ಸಂದೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಳಕೆ ಮತ್ತು ಬೋಳೂರು ಗ್ಯಾಂಗ್‌ಗಳ ಮಧ್ಯೆ ಹುಲಿ ವೇಷ ಮತ್ತು ಗುಂಪುಗಾರಿಕೆ ವಿಚಾರದಲ್ಲಿ ಈ ಮೊದಅನಿಂದಲೂ ವೈಷಮ್ಯ ಇತ್ತು. 2014ರಲ್ಲಿ ಬೋಳೂರು ಗ್ಯಾಂಗ್‌ನ ತಲ್ವಾರ್ ಜಗ್ಗನ ಮಗನಾದ ಸಂಜಯ್ ಯಾನೆ ವರುಣ್‌ನನ್ನು ಅಳಕೆ ಗ್ಯಾಂಗ್‌ನ ಆಶೀತ್, ಅಭಿಲಾಷ್, ವಿಕಾಸ್, ಕಾರ್ತಿಕ್, ಮನೀತ್ ಮತ್ತು ವಿಜಯ್ ಮುಂತಾದವರು ಕೊಲೆ ಮಾಡಿದ್ದರು.
ಇದಕ್ಕೆ ಪ್ರತೀಕಾರವಾಗಿ 2019ರಲ್ಲಿ ಅಳಕೆ ಗ್ಯಾಂಗ್‌ನ ರಿತೇಶ್ ಈತನಿಗೆ ಬೋಳೂರು ಗ್ಯಾಂಗ್ ನ ವಿಕ್ಕಿ ಬಪ್ಪಾಲ್, ರಾಜು ಬೋಳೂರು, ಅವಿನಾಶ್ ಬೋಳೂರು, ಪರಮ ಎಡಪದವು ದೀಕ್ಷಿತ್, ಜಯಪ್ರಕಾಶ್ ಬೋಳೂರು, ತ್ರಿಶೂಲ್ ಬೋಳೂರು ಇವರುಗಳು 2019ರಲ್ಲಿ ತಲ್ವಾರಿನಿಂದ ಕೊಲೆಗೆ ಪ್ರಯತ್ನಿಸಿದ್ದು, ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದ್ವೇಷ ಮುಂದುವರಿದು 2020ರಲ್ಲಿ ಅಳಕೆ ಗ್ಯಾಂಗ್‌ನ ಇಂದ್ರಜಿತ್ ಎಂಬಾತನನ್ನು ಬೋಳೂರು ಗ್ಯಾಂಗ್‌ನ ಉಲ್ಲಾಸ್ ಕಾಂಚನ್, ಗೌತಮ್, ರಾಕೇಶ್, ಶರಣ್, ಕೌಶಿಕ್, ಆಶಿಕ್, ಮೋಕ್ಷಿತ್, ತಲ್ವಾರ್ ಜಗ್ಗ, ನಿತಿನ್ ಪೂಜಾರಿ, ದೇವದಾಸ್ ಪೂಜಾರಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದರು. ಆ ಪೈಕಿ ಉಲ್ಲಾಸ್ ಕಾಂಚನ್, ಗೌತಮ್, ರಾಕೇಶ್, ಶರಣ್, ಕೌಶಿಕ್, ಆಶಿಕ್, ಮೋಕ್ಷಿತ್ ಸದ್ಯ ಜೈಲಿನಲ್ಲಿದ್ದಾರೆ.
ಇದೇ ದ್ವೇಷದ ಹಿನ್ನೆಲೆಯಲ್ಲಿ ಇದೇ ನ. 28ರ ಮಧ್ಯರಾತ್ರಿ ಅಳಕೆ ಗ್ಯಾಂಗಿನ ಇಂದ್ರಜಿತ್‌ನ ಸ್ನೇಹಿತರಾದ ನವನೀತ್, ಹೇಮಂತ್, ದೀಕ್ಷಿತ್, ಬೋಳೂರು ಇಂದ್ರಜಿತ್‌ನ ಕೊಲೆ ಪ್ರತೀಕಾರವಾಗಿ ಪ್ರಸ್ತುತ ಜೈಲಿನಲ್ಲಿರುವ ಕೌಶಿಕ್ ಮತ್ತು ಆಶಿಕ್ ರವರ ಸಹೋದರನಾದ ಅಂಕಿತ್ ಬೋಳೂರು ಅನ್ನು ಕೊಲೆಮಾಡುವ ಉದ್ದೇಶದಿಂದ ತಲ್ವಾರ್‌ನಿಂದ ಹಲ್ಲೆಮಾಡಿದ್ದಾರೆ ಈ ವೇಳೆ ಅಂಕಿತ್ ತಪ್ಪಿಸಿಕೊಂಡಿದ್ದು, ಹಲ್ಲೆಯನ್ನು ತಡೆಯಲು ಮುಂದಾದ ಶ್ರವಣ್ ಎಂಬಾತನ ಎಡಕುತ್ತಿಗೆಗೆ ತಲವಾರಿನ ಬಲವಾದ ಪೆಟ್ಟು ಬಿದ್ದು ತೀವ್ರ ತರಹದ ರಕ್ತಗಾಯವಾಗಿತ್ತು.





