ಪ್ರಧಾನಿ ಮೋದಿಯ ರ್ಯಾಲಿಗೆ ಹೋಗುತ್ತಿದ್ದ ಬಸ್ ಅಪಘಾತ:
ಒಂದೇ ಕುಟುಂಬದ ಮೂರು ಮಂದಿ ಮೃತ್ಯು, ಇಬ್ಬರಿಗೆ ಗಾಯ
ಡೆಹ್ರಾಡೂನ್: ಜಿಲ್ಲೆಯ ಮೊಹಂಡ್ ಗ್ರಾಮದ ಬಳಿ ಪ್ರಧಾನಿ ಮೋದಿ ಅವರು ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆಸುತ್ತಿರುವ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಮೂವರು ದಾರುಣವಾಗಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಡೆಹ್ರಾಡೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮತ್ತು ಮದುವೆಯ ಶಾಪಿಂಗ್‌ಗಾಗಿ ಕುಟುಂಬವು ಸಹರಾನ್‌ಪುರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಬಸ್ ಹಾಗೂ ಕಾರೊಂದು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಇವರು ಒಂದೇ ಕುಟುಂಬದವರು ಎನ್ನಲಾಗಿದೆ. ತಂದೆ ತಾಯಿ ಮತ್ತು ಅವರ ಮಗು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬಿಹಾರಿಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ಸಂಭವಿಸಿದ್ದು, ಪ್ರವೀಣ್ ಚೌಹಾಣ್ (45), ಅವರ ಪತ್ನಿ ಮಂಜು ಚೌಹಾಣ್ (42), ಮಗಳು ಶಿಲ್ಪಾ (22), ಮತ್ತು ಇಬ್ಬರು ಪುತ್ರರಾದ ವಿಷ್ಣು (17) ಮತ್ತು ದೀಕ್ಷಾಂತ್ (20) ಅವರು ಪ್ರಯಾಣಿಸುತ್ತಿದ್ದರು.
ಪೊಲೀಸ್ ಅಧೀಕ್ಷಕ ಅತುಲ್ ಶರ್ಮಾ ಪ್ರಕಾರ, ಡಿಕ್ಕಿಯ ಪರಿಣಾಮವು ಪ್ರವೀಣ್, ಮಂಜು ಮತ್ತು ಶಿಲ್ಪಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಪುತ್ರರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪ್ರವೀಣ್ ಚೌಹಾಣ್ ಡೆಹ್ರಾಡೂನ್ ಜಲ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.





