ಭಾರತದಲ್ಲಿ ಎಕೆ-203 ರೈಫಲ್‌ಗಳ ತಯಾರಿಕಾ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ
ನವ ದೆಹಲಿ: ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ರಷ್ಯಾ ಜೊತೆಗಿನ ಜಂಟಿ ಉದ್ಯಮವಾಗಿರುವ ಈ ಯೋಜನೆಗೆ ಕೇಂದ್ರ ಅಂತಿಮ ಅನುಮತಿ ನೀಡಿರುವುದರಿಂದ ಭಾರತದಲ್ಲಿ ಎಕೆ-203 ರೈಫಲ್‌ಗಳ ತಯಾರಿಕೆ ಆರಂಭವಾಗಲಿದೆ.
ಐದು ಲಕ್ಷಕ್ಕೂ ಅಧಿಕ AK-203 ಅಸಾಲ್ಟ್ ರೈಫಲ್‌ಗಳನ್ನು ತಯಾರಿಸಲು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಕೊರ್ವಾದಲ್ಲಿ ಇಂಡೋ-ರಷ್ಯನ್ ಘಟಕವನ್ನು ಸ್ಥಾಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
7.62 X 39mm ಕ್ಯಾಲಿಬರ್ ಹೊಂದಿರುವ AK-203 ರೈಫಲ್‌ಗಳು 300 ಮೀಟರ್‌ಗಳ ಪರಿಣಾಮಕಾರಿ ವ್ಯಾಪ್ತಿಯೊಂದಿಗೆ, ಹಗುರವಾದ, ದೃಢವಾದ ಮತ್ತು ಸಾಬೀತಾಗಿರುವ ತಂತ್ರಜ್ಞಾನದೊಂದಿಗೆ ಬಳಸಲು ಅತ್ಯುತ್ತಮವಾಗಿದೆ. ಆಧುನಿಕ ಆಕ್ರಮಣಕಾರಿ ರೈಫಲ್‌ಗಳನ್ನು ಬಳಸಲು ಸೈನಿಕರಿಗೆ ಸುಲಭವಾಗಿದೆ. ಇದು ಪ್ರಸ್ತುತ ಮತ್ತು ಯೋಜಿತ ಕಾರ್ಯಾಚರಣೆಯ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಸೈನಿಕರ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಯ ಪ್ರಕಾರ, ರಷ್ಯಾದಿಂದ ನೇರವಾಗಿ 20,000 ರೈಫಲ್‌ಗಳನ್ನು ತರಲಾಗುವುದು ಮತ್ತು ನಂತರ 5 ಲಕ್ಷಕ್ಕೂ ಹೆಚ್ಚು ಭಾರತದಲ್ಲಿ ತಯಾರಿಸಲಾಗುವುದು ಎಂದು ತಿಳಿದುಬಂದಿದೆ.





