February 3, 2026

ಗಂಡ ಹೆಂಡತಿ ಜಗಳದಲ್ಲಿ ಮಗು ಸಾವು

0
image_editor_output_image-1393513368-1706167542155.jpg

ರಾಮನಗರ: ಗಂಡ ಹೆಂಡತಿ ಜಗಳದಲ್ಲಿ ಮಗು ಮೃತಪಟ್ಟಿರುವ ಘಟನೆ ಹಾರೋಹಳ್ಳಿ ತಾಲೂಕಿನ ಗೋದೂರು ಗ್ರಾಮದಲ್ಲಿ ನಡೆದಿದೆ.‌

ಗಂಡ ಹೆಂಡತಿ ಇಬ್ಬರ ಜಗಳದ ಹಿನ್ನೆಲೆಯಲ್ಲಿ ತಾನೂ ವಿಷ ಕುಡಿದ ಮಹಿಳೆ ತನ್ನ ಮಗುವಿಗೂ ವಿಷ ನೀಡಿದ್ದಾಳೆ ಆದರೆ, ಈ ವೇಳೆ 3 ವರ್ಷದ ಮಗು ದೀಕ್ಷಿತ್ ಗೌಡ ಮೃತಪಟ್ಟಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಗೋದೂರು ಗ್ರಾಮದ ಸೋಮಕುಮಾರ್ ಮತ್ತು ಪೂರ್ಣಿಮಾ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರ ನಡುವೆ ಆಗ್ಗಾಗೆ ಜಗಳ ಉಂಟಾಗುತ್ತಿತ್ತು.

ಮಂಗಳವಾರವೂ ಸಹ ಇಬ್ಬರ ನಡುವೆ ಜಗಳ ಆರಂಭಗೊಂಡು ಇದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಪೂರ್ಣಿಮಾ ಮನೆಯಲ್ಲಿದ್ದ ಜಿಗಣೆ ಔಷಧಿ ಲಕ್ಷ್ಮಣ ರೇಖೆಯನ್ನು ಕಲಸಿಕೊಂಡು ತಾನು ಕುಡಿದು ತನ್ನ ಮಗು ದೀಕ್ಷಿತ್ ಗೌಡನಿಗೂ ಕುಡಿಸಿದ್ದಾಳೆ.

ತಕ್ಷಣವೇ ಇವರಿಬ್ಬರನ್ನು ಹಾರೋಹಳ್ಳಿ ಬಳಿಯ ದಯಾನಂದ್ ಸಾಗರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮಗು ದೀಕ್ಷಿತ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಪೂರ್ಣಿಮ ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆಯ ಮಾತಿನಂತೆ ಇಲ್ಲಿ ಗಂಡ ಹೆಂಡಿರ ಜಗಳದಲ್ಲಿ ಏನು ಅರಿಯದ ಪುಟ್ಟ ಕಂದಮ್ಮನ ಪ್ರಾಣ ಪಕ್ಷಿ ಹಾರಿಹೋಗಿದೆ.

ಮೃತ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ ಗ್ರಾಮದಲ್ಲಿ ನೀರವ ಮೌನ ಉಂಟಾಗಿದ್ದು ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಹಾರೋಹಳ್ಳಿ ಪೊಲೀಸರು ಸೋಮ ಕುಮಾರ್ ಮತ್ತು ಪೂರ್ಣಿಮಾ ಇಬ್ಬರ ವಿರುದ್ಧವೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!